ವಕೀಲರ ಜೊತೆಗೆ ವಿನಯತೆ, ಸೌಜನ್ಯದಿಂದ ವರ್ತಿಸಿ, ಅವರ ಕರ್ತವ್ಯಕ್ಕೆ ಸಹಕರಿಸಿ – ಹೈಕೋರ್ಟ್

ಅಲಹಾಬಾದ್: ನ್ಯಾಯಾಲಯದ ಕಲಾಪ ಹಾಗೂ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವ ವಕೀಲರ ಜೊತೆಗೆ ವಿನಯತೆ ಸೌಜನ್ಯದಿಂದ ವರ್ತಿಸಿ ಅವರ ಕರ್ತವ್ಯಕ್ಕೆ ಸಹಕರಿಸಬೇಕು ಎಂದು ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲಹಾಬಾದ್ ಹೈಕೋರ್ಟ್ ಈ ಸಂಬಂಧ ಕಚೇರಿ ಆದೇಶವನ್ನು ಹೊರಡಿಸಿದ್ದು, ವಕೀಲರು ಮತ್ತು ವಕೀಲರ ಗುಮಾಸ್ತರ ಜೊತೆಗೆ ಸಂವಹನ ಮಾಡುವಾಗ ವಿನಯತೆಯಿಂದ, ಸೌಜನ್ಯದಿಂದ ವರ್ತಿಸಬೇಕು. ಅವರ ಕರ್ತವ್ಯಕ್ಕೆ ಸಹಕಾರ ನೀಡಬೇಕು. ಸಂಯಮವನ್ನು ಕಾಪಾಡಿಕೊಳ್ಳಿ ಎಂದು ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಸೂಚಿಸಿದೆ.
ವಕೀಲರು ಉದಾತ್ತ ವರ್ಗವಾಗಿದ್ದು, ಸಮಾಜದ ಬಡವರು, ಶೋಷಿತರು ಮತ್ತು ಸೌಲಭ್ಯ ವಂಚಿತ ಜನರ ಪರ ಧ್ವನಿ ಎತ್ತುವ ಮೂಲಕ ಸಮಾಜದ ಸೇವೆ ಸಲ್ಲಿಸುತ್ತಾರೆ. ಆದುದರಿಂದ ಎಲ್ಲ ನ್ಯಾಯಾಲಯದ ಅಧಿಕಾರಿಗಳು ವಕೀಲರೊಂದಿಗೆ ಸೌಜನ್ಯದ ವರ್ತನೆ ತೋರಬೇಕು, ತಮ್ಮ ನಡೆ-ನುಡಿ ಸೂಕ್ತ ನಮ್ರತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ವಕೀಲರು ಮತ್ತು ವಕೀಲರ ಗುಮಾಸ್ತರ ಜೊತೆಗೆ ಅತ್ಯಂತ ತಾಳ್ಮೆ ಮತ್ತು ಗೌರವದೊಂದಿಗೆ ವರ್ತಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಅನುಚಿತವಾಗಿ ನಡೆದುಕೊಂಡರೆ ವಕೀಲರು ದೂರು ನೀಡಬೇಕು ಎಂದಿರುವ ನ್ಯಾಯಾಲಯ, ಸಿಬ್ಬಂದಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ರಿಜಿಸ್ಟ್ರಾರ್ ಗಳು ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ಎಲ್ಲ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ