ಲಂಚ ಸ್ವೀಕಾರ ಮೇಲ್ನೋಟಕ್ಕೆ ಸಾಬೀತು: ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ
ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ)ನ ಸಹಾಯಕ ಎಂಜಿನಿಯರ್ ವಿರುದ್ದದ ಲಂಚ ಸ್ವೀಕಾರ, ಭ್ರಷ್ಟಾಚಾರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವನ್ನ ರದ್ದುಗೊಳಿಸಲು ನಿರಾಕರಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ)ನ ಸಹಾಯಕ ಎಂಜಿನಿಯರ್ ವೈ.ಎಚ್.ಪಿ. ಯತೀಶ್ ವಿರುದ್ದದ ಪ್ರಕರಣವನ್ನ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿದೆ. ಯತೀಶ್ ಅವರ ಕಾರಿನಲ್ಲಿ ಲಂಚದ ಹಣ ಇತ್ತು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು. ರಾಸಾಯನಿಕ ಪರೀಕ್ಷೆಯಲ್ಲೂ ಅದು ದೃಢಪಟ್ಟಿದೆ. ಹಾಗಾಗಿ, ಅವರ ವಿರುದ್ಧ ಪ್ರಕರಣ ರದ್ದು ಮಾಡಲಾಗದು ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಏನಿದು ಪ್ರಕರಣ..
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವೆಂಕಟೇಶ್ ಮತ್ತು ಅಜಯ್ ಕುಮಾರ್ ಅವರಿಗೆ ಸೇರಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೋರಿ ಶ್ರೀ ಚಕದ ಎಲೆಕ್ನಿಕಲ್ಸ್ನ ವರ್ಕ್ ಇನ್ಸ್ಪೆಕ್ಟರ್ ಎನ್. ಚಂದನ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಅವರನ್ನು ಸಂಪರ್ಕಿಸಿದ ಎಂಜಿನಿಯರ್ ಯತೀಶ್ ಅರ್ಜಿದಾರರನ್ನು ಸತೀಶ್ ಎಂಬರೊಂದಿಗೆ ಮಾತನಾಡುವಂತೆ ತಿಳಿಸಿದರು. ಸತೀಶ್ ಅವರು ಐದು ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದರು.
ಹೊಟೇಲ್ನಲ್ಲಿ ಮಾತುಕತೆಯ ನಂತರ ಲಂಚದ ಮೊತ್ತವನ್ನು 3.8 ಲಕ್ಷ ರೂಪಾಯಿಗೆ ಇಳಿಸಲಾಗಿತ್ತು. ಈ ಕುರಿತು ಸಂಭಾಷಣೆ ವಿವರಗಳು ದೂರುದಾರರಾದ ಚಂದನ್ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದವು. 2024ರ ಏಪ್ರಿಲ್ 8ರಂದು ಕೆಪಿಟಿಸಿಎಲ್ ಕಚೇರಿಯ ಹಿಂಭಾಗದ ಬ್ರಿಗೇಡ್ ವೈದಾಸ್ ಬಳಿ ಹಣ ತಲುಪಿಸಲಾಗಿತ್ತು. ವೆಂಕಟೇಶ್ವರ ಸ್ಟ್ರೀಟ್ ಮೀಟ್ ಸ್ಮಾಲ್ ಬಳಿ ಹಣವನ್ನು ಹಸ್ತಾಂತರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯ ವಾಹನದಿಂದ ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಸಂಬಂಧ ವಿಚಾರ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಆರೋಪಿ/ಅರ್ಜಿದಾರರು ಲಂಚದ ಬೇಡಿಕೆ ಇಟ್ಟಿಲ್ಲ ಎಂದಾದರೆ ದೂರುದಾರರು ಹಣವನ್ನು ತೆಗೆದುಕೊಂಡು ವೆಂಕಟೇಶ್ವರ ಸ್ಟ್ರೀಟ್ ಮೀಟ್ ಸ್ಮಾಲ್ ಬಳಿ ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿತು. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಲಂಚ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಬಾಧಿತ ನೊಂದ ವ್ಯಕ್ತಿಯ ಯಾವುದೇ ಕೆಲಸ ಅರ್ಜಿದಾರರ ಬಳಿ ಬಾಕಿ ಇಲ್ಲ ಎಂಬುದು ಅಪ್ರಸ್ತುತ. ಆಗಬೇಕಾಗಿರುವ ಕೆಲಸ ಅಧಿಕಾರಿಯ ಬಳಿ ಬಾಕಿ ಇಲ್ಲದಿದ್ದರೂ ಲಂಚದ ಆರೋಪದಿಂದ ಮುಕ್ತರಾದಂತಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ರಾಸಾಯನಿಕ ಪರೀಕ್ಷೆಯಲ್ಲಿ ಆರೋಪಿ ಬೆಸ್ಕಾಂ ಅಧಿಕಾರಿಯ ಕೈಗಳು ಗುಲಾಬಿ ಬಣ್ಣಕ್ಕೆ ತಿರುಗಿದೆ. ಸ್ವಾಬ್ ಪರೀಕ್ಷೆಯನ್ನೂ ಮಾಡಲಾಗಿದೆ. ಎಲ್ಲ ರೀತಿಯ ಪರೀಕ್ಷೆಯಲ್ಲೂ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುವಂತಿದೆ. ಈ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಲಂಚದ ಹಣ ಸ್ವೀಕರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಆರೋಪಿಯ ವಿರುದ್ಧದ ತನಿಖೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
