20/05/2025

Law Guide Kannada

Online Guide

ತಮ್ಮ ವೃತ್ತಿ ಹಾಗೂ ಸೇವೆಗಳ ಕುರಿತಂತೆ ವಕೀಲರು ಜಾಹೀರಾತು ನೀಡಬಹುದೇ…?

ಬೆಂಗಳೂರು: ವಕೀಲರು ತಮ್ಮ ವೃತ್ತಿ ಹಾಗೂ ಸೇವೆಗಳ ಕುರಿತಂತೆ ಜಾಹೀರಾತು ನೀಡುವಂತಿಲ್ಲ ಎಂದು ಭಾರತೀಯ ವಕೀಲರ ಮಂಡಳಿ (ಬಿಸಿಐ) ಈ ಬಗ್ಗೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

ಜಾಹೀರಾತು ನೀಡುವ ವಕೀಲರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ಬಿಸಿಐ ಸೂಚಿಸಲಾಗಿದೆ. ಆನ್ ಲೈನ್ ಪೋರ್ಟಲ್ ಗಳ ಮೂಲಕ ಜಾಹೀರಾತು ನೀಡಿ ಕೆಲಸ ಕೇಳುವ ಇಲ್ಲವೇ ಕೆಲಸ ಹುಡುಕುವ ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಸಿಐ ತನ್ನ ಅಧೀನವಿರುವ ಎಲ್ಲ ರಾಜ್ಯಗಳ ವಕೀಲರ ಪರಿಷತ್ತುಗಳಿಗೆ ಪತ್ರ ಬರೆದಿದೆ. ಬಿಸಿಐ ನಿಯಮ 36ರ ಅಡಿಯಲ್ಲಿ ಅಂತಹ ವಕೀಲರ ಸನದು ಅಮಾನತು ಮಾಡುವ ಇಲ್ಲವೇ ರದ್ದುಪಡಿಸುವ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಜಾಹೀರಾತು ನೀಡುವ ನ್ಯಾಯವಾದಿಗಳಿಗೆ ಇದೀಗ ಸಂಕಷ್ಟ ಎದುರಾಗಲಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿ ಆನ್ಲೈನ್ ವೆಬ್ ಸೈಟ್ ಗಳ ಮೂಲಕ ವಕೀಲರು ಕೆಲಸ ಕೇಳುವುದರ ವಿರುದ್ಧ ಇತ್ತೀಚಿಗಷ್ಟೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಈ ತೀರ್ಪಿಗೆ ಪೂರಕವಾಗಿ ಬಿಸಿಐ ಈ ಸುತ್ತೋಲೆಯನ್ನು ಹೊರಡಿಸಿದೆ. ವಕೀಲರ ಸೇವೆಗಳು ವ್ಯವಹಾರವಲ್ಲ ಎಂದಿರುವ ಬಿಸಿಐ, ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಕ್ಲಿಕ್ಕರ್, ಸುಲೇಖಾ, ಜಸ್ಟ್ ಡಯಲ್ ಹಾಗೂ ಗೋಟಲ್ ಡಾಟ್ ಕಾಮ್ ಗಳಿಗೆ ನೋಟೀಸ್ ಜಾರಿಗೊಳಿಸಿದೆ. ತಮ್ಮ ಆನ್ ಲೈನ್ ಫ್ಯಾಟ್ ಫಾರ್ಮ್ ಗಳಿಂದ ಇಂತಹ ಜಾಹೀರಾತುಗಳನ್ನು ತೆಗೆದುಹಾಕುವಂತೆ ಬಿಸಿಐ ಸೂಚನೆ ನೀಡಿದೆ. ಇಂತಹ ಕ್ರಮವು ಬಿಸಿಐನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ.

ಇದೇ ವೇಳೆ, ಇಂತಹ ಜಾಹೀರಾತು ನೀಡುವ ಅಂತರ್ಜಾಲ ವೇದಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಬಿಸಿಐ ನೀಡಿದ ಈ ಸೂಚನೆಯನ್ನು ಪಾಲಿಸಿದ ಕುರಿತು ಅನುಸರಣಾ ವರದಿಯನ್ನು ಆಗಸ್ಟ್ 10, 2024ರೊಳಗೆ ಸಲ್ಲಿಸುವಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಸೂಚಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.