06/03/2026

Law Guide Kannada

Online Guide

ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆ ಸಿಬಿಐಗೆ: ಸಹಕರಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳು ಹೆಚ್ಚುತ್ತಿದ್ದು ಇದರ ವಿರುದ್ಧ ಸಮರ ಸಾರಿರುವ ಸುಪ್ರೀಂ ಕೋರ್ಟ್ ಡಿಜಿಟಲ್ ಬಂಧನ ಅಥವಾ ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆಯನ್ನು ಒಟ್ಟು ಸೇರಿಸಿ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಸೂಚನೆ ನೀಡಿದೆ.

ಇದೇ ಸಂದರ್ಭದಲ್ಲಿ ಸೈಬರ್ ಅಪರಾಧಿಗಳು ಬಳಸುವ ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲು ಮತ್ತು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ನೀವು ಏಕೆ ಬಳಸುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಗೂ ಪ್ರಶ್ನೆ ಮಾಡಿದೆ.

ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಹರಿಯಾಣದ ವೃದ್ಧ ದಂಪತಿ ಅಪಾರ ಹಣ ಕಳೆದುಕೊಂಡ ಪ್ರಕರಣವನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ.ಜೋಮಲ್ಯ ಬಾಗ್ಚಿ ಅವರಿದ್ದ ಪೀಠ, ದೇಶಾದ್ಯಂತ ವರದಿಯಾಗುತ್ತಿರುವ ಎಲ್ಲಾ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳ ಶನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ(ಸಿಬಿಐ) ವಹಿಸಿ ಆದೇಶ ಹೊರಡಿಸಿತು. ಹಾಗೆಯೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ರಾಜ್ಯ ಸರಕಾರಗಳಿಗೆ ತನಿಖೆಗೆ ಸಹಕರಿಸುವಂತೆ ಸಿಜೆಐ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ. ಜೋಮಲ್ಯ ಬಗ್ಚಿ ಅವರಿದ್ದ ಪೀಠ ಸೂಚಿಸಿದೆ. ಈ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಸರಕಾರಗಳು ಅನುಮತಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಕೋರ್ಟ್ ಈ ನಿರ್ದೇಶನ ನೀಡಿದೆ.

ರಿಸರ್ವ್ ಬ್ಯಾಂಕ್ಗೆ ನೋಟಿಸ್ ನೀಡಿದ ಸುಪ್ರೀಂ:
ಸೈಬರ್ ಅಪರಾಧಿಗಳ ಬ್ಯಾಂಕ್ ಖಾತೆಗಳನ್ನು ಗುರುತಿಸಿ, ಸ್ತಂಭನಗೊಳಿಸಲು ‘ಕೃತಕ ಬುದ್ಧಿಮತ್ತೆ’ (ಎಐ) ತಂತ್ರಜ್ಞಾನವನ್ನು ಏಕೆ ಬಳಸುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ನಿಟ್ಟಿನಲ್ಲಿ ‘ಆರ್ಬಿಐ’ಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠ, ಉತ್ತರಿಸಲು ಗಡುವು ನೀಡಿದೆ.

ಸೈಬರ್ ಅಪರಾಧಿಗಳು ಹೆಚ್ಚಾಗಿ ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತು.

ಡಿಜಿಟಲ್ ಬಂಧನ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಳಲ್ಲಿ ಸಿಬಿಐಗೆ ವಿವರ ಮತ್ತು ಸಹಕಾರ ನೀಡುವಂತೆ ಮಾಹಿತಿ ತಂತ್ರಜ್ಞಾನ (ಐಟಿ) ಮಧ್ಯವರ್ತಿಗಳಿಗೂ ಕೋರ್ಟ್ ನಿರ್ದೇಶನ ಕೊಟ್ಟಿದೆ.

‘ತೆರಿಗೆ ಸ್ವರ್ಗ’ದ ಕಡಲಾಚೆಯ ದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳನ್ನು ಮಟ್ಟ ಹಾಕಲು ಇಂಟರ್ಪೋಲ್ ಸಹಾಯವನ್ನು ಪಡೆಯುವಂತೆಯೂ ಕೋರ್ಟ್, ಸಿಬಿಐಗೆ ತಿಳಿಸಿದೆ. ವಂಚಕರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲು ಎಲ್ಲಾ ರಾಜ್ಯಗಳು, ಅಲ್ಲಿನ ಪೊಲೀಸ್ ಇಲಾಖೆಗಳು ಮತ್ತು ಸಿಬಿಐಗೆ ಮುಕ್ತ ಅಧಿಕಾರವಿದೆ. ನಕಲಿ ಬ್ಯಾಂಕ್ ಖಾತೆ ಮೂಲಕ ಸೈಬರ್ ಅಪರಾಧಿಗಳಿಗೆ ಸಹಕರಿಸುವ ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಏನಿದು ಡಿಜಿಟಲ್ ಅರೆಸ್ಟ್?
ಪೊಲೀಸರು, ಕೋರ್ಟ್ ಅಧಿಕಾರಿಗಳು, ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ಆಡಿಯೊ ಅಥವಾ ವಿಡಿಯೊ ಕಾಲ್ ಮೂಲಕ ಜನರನ್ನು ಬೆದರಿಸಿ ಹಣ ಪೀಕುವ ಪ್ರಕರಣಗಳೇ ‘ಸೈಬರ್ ಅರೆಸ್ಟ್’, ಇಲ್ಲಿ ಜನರ ಭಯವೇ ವಂಚಕರ ಆಸ್ತ್ರ, ಅಪರಾಧಿಗಳು ತಮ್ಮ ಬಲೆಗೆ ಸಿಲುಕಿದವರನ್ನು ಕಾನೂನು ಕ್ರಮದ ಹೆಸರಿನಲ್ಲಿ ಬೆದರಿಸಿ, ಅವರಿಂದ ಹಂತ ಹಂತವಾಗಿ ಲಕ್ಷಾಂತರ, ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವಿಷಯವನ್ನು ಯಾರಿಗೂ ಹಂಚಿಕೊಳ್ಳದಂತೆ ಬೆದರಿಸುತ್ತಾರೆ. ಹಲವು ಗಂಟೆಗಳಿಂದ ಹಿಡಿದು ಹಲವು ದಿನಗಳವರೆಗೂ ‘ಡಿಜಿಟಲ್ ಅರೆಸ್ಟ್’ ಆಗಿರುವ ಪ್ರಕರಣಗಳಿವೆ. ಅದರಲ್ಲೂ ಹಿರಿಯ ನಾಗರಿಕರೇ ಇಂತಹ ವಂಚಕರ ಟಾರ್ಗೆಟ್ ಆಗುತ್ತಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.