06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಶೇ. 20ರಷ್ಟು ಮಧ್ಯಂತರ ಪರಿಹಾರ ಕಡ್ಡಾಯವಲ್ಲ- ಹೈಕೋರ್ಟ್

ಬೆಂಗಳೂರು: ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿ ವ್ಯಕ್ತಿಯು ದೂರುದಾರರಿಗೆ ಚೆಕ್ ಮೊತ್ತದ ಶೇಕಡ 20ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ಮೊತ್ತದ ಶೇಕಡ 20ರಷ್ಟು ಮಧ್ಯಂತರ ಪರಿಹಾರವಾಗಿ ನೀಡುವಂತೆ ವಿಚಾರಣ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 143 ಎ ಅಡಿ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿ ವ್ಯಕ್ತಿ ದೂರುದಾರರಿಗೆ ಚೆಕ್ ಮೊತ್ತದ ಶೇಕಡಾ 20ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ತಿಳಿಸಿದೆ.

ವರ್ಗಾವಣೀಯ ಪತ್ರಗಳ ಕಾಯ್ದೆ 1881ರ ಸೆಕ್ಷನ್ 143 ಎ ಅಡಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನೀಡುವಂತೆ ಆರೋಪಿಗೆ ಆದೇಶಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಧಿಕಾರ ನೀಡಲಾಗಿದೆ. ಚೆಕ್ ನೀಡಿದ ವ್ಯಕ್ತಿ ಅಥವಾ ಆರೋಪಿ ತನ್ನ ಆರೋಪ ಒಪ್ಪಿಕೊಳ್ಳದೆ ಇದ್ದಾಗ ದೂರುದಾರರಿಗೆ ಶೇಕಡಾ 20ರಷ್ಟು ಪರಿಹಾರ ನೀಡಲು ಕೋರ್ಟ್ ಆದೇಶ ಮಾಡಬಹುದು. ಅದರಂತೆ ಸೆಕ್ಷನ್ 143-A(1) ಅಡಿ ಚೆಕ್ ನೀಡಿದ ವ್ಯಕ್ತಿ ಅಥವಾ ಆರೋಪಿ ತನ್ನ ತಪ್ರೊಪ್ಪಿಕೊಳ್ಳದಿದ್ದಾಗ ದೂರುದಾರನಿಗೆ ಶೇ.20ರಷ್ಟು ಪರಿಹಾರ ನೀಡಲು ಕೋರ್ಟ್ ಆದೇಶಿಸಬಹುದಾಗಿದೆ.

ಮಧ್ಯಂತರ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದಾಗ, ಆದೇಶ ಹೊರಡಿಸಿದ 60 ದಿನಗಳ ಒಳಗೆ ಆರೋಪಿ ಈ ಪರಿಹಾರದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆರೋಪಿಯ ಮನವಿಯ ಮೇರೆಗೆ ಈ ಅವಧಿಯನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸಬಹುದಾಗಿದೆ. ಹೀಗೆ ಮಧ್ಯಂತರ ಪರಿಹಾರ ರೂಪದಲ್ಲಿ ಪಡೆದ ಮೊತ್ತವನ್ನು ಆರೋಪಿಯು ಆರೋಪ ಮುಕ್ತಗೊಂಡ ಸಂದರ್ಭದಲ್ಲಿ ಫಿರ್ಯಾದಿ 60 ರಿಂದ 90 ದಿನಗಳ ಒಳಗೆ ಬಡ್ಡಿ ಸಹಿತ ವಾಪಸ್ ನೀಡಬೇಕಾಗುತ್ತದೆ.

ಹೀಗೆ ಮಧ್ಯಂತರ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದರೆ, ಈ ಆದೇಶವನ್ನು ಆರೋಪಿಯು ಪಾಲಿಸದೇ ಇದ್ದರೆ, ದೂರುದಾರನು ಸಿಆರ್ಪಿಸಿ ಸೆಕ್ಷನ್ 420 ಅಥವಾ 357ರ ಅಡಿಯಲ್ಲಿ ಆರೋಪಿಯ ಆಸ್ತಿ ಜಪ್ತಿಗೆ ಕೋರಿ ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಕಾನೂನಿನಲ್ಲಿ ಅವಕಾಶ ಇದೆ ಎಂದ ಮಾತ್ರಕ್ಕೆ ನೆಗೋಷಿಯಬಲ್ ಇನ್ನು ಮೆಂಟ್ ಆಕ್ಟ್ನ ಸೆಕ್ಷನ್ 143 ಎ ನಿಯಮವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಯಥಾವತ್ತಾಗಿ ಜಾರಿಗೆ ಮಾಡಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಚೆಕ್ ಬೌನ್ಸ್ ವಿಚಾರವಾಗಿ ದೂರು ದಾಖಲಿಸಿರುವ ವ್ಯಕ್ತಿಗೆ ಪರಿಹಾರ ಪಾವತಿಸಲು ಆರೋಪಿಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್ ತನ್ನ ಆದೇಶಕ್ಕೆ ಸಕಾರಣಗಳನ್ನು ದಾಖಲಿಸಬೇಕು. ಕೇವಲ ಆರೋಪಿ ಅಥವಾ ಚೆಕ್ ನೀಡಿದ ವ್ಯಕ್ತಿ ತಪ್ಪು ಒಪ್ಪಿಕೊಂಡಿಲ್ಲ ಎಂಬ ಏಕೈಕ ಕಾರಣಕ್ಕೆ ಪರಿಹಾರ ನೀಡುವಂತೆ ಆದೇಶ ಮಾಡಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಸೆಕ್ಷನ್ 143 ರ ಎ ಅಡಿಯಲ್ಲಿ ಪರಿಹಾರ ನೀಡುವಂತೆ ಆದೇಶ ನೀಡಬಹುದು ಎಂದು ಹೇಳಲಾಗಿದೆಯೇ ಹೊರತು ಕಡ್ಡಾಯವಾಗಿ ನೀಡಲೇಬೇಕು ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸುವಾಗ ನ್ಯಾಯಾಲಯ ತನ್ನ ನ್ಯಾಯಿಕ ವಿವೇಚನಾಧಿಕಾರವನ್ನು ಬಳಸಬೇಕು. ಆರೋಪಿ ತಪ್ಪು ಒಪ್ಪಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಚೆಕ್ ಮೊತ್ತದ ಶೇಕಡ 20ರಷ್ಟನ್ನು ಮಧ್ಯಂತರ ಪರಿಹಾರವಾಗಿ ಪಿರಿಯಾದಿಗೆ ನೀಡುವಂತೆ ಆದೇಶ ಮಾಡಬಾರದು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ..
ಮಹಿಳೆಯೊಬ್ಬರು 2 ಕೋಟಿ ರೂಪಾಯಿ ಹಣವನ್ನು ನಗದು ರೂಪದಲ್ಲಿ ಒಂದು ತಿಂಗಳಲ್ಲಿ ಹಿಂದಿರುಗಿಸುವುದಾಗಿ 2020ರ ಡಿಸೆಂಬರ್ ನಲ್ಲಿ ಪಡೆದುಕೊಂಡಿದ್ದರು, ಅದಕ್ಕೆ ಭದ್ರತೆಯಾಗಿ ಚೆಕ್ ನೀಡಿದ್ದರು, ಆದರೆ ಚೆಕ್ ಬ್ಯಾಂಕ್ ನಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಯಲಬುರ್ಗ ಸಿವಿಲ್ ನ್ಯಾಯಾಲಯದಲ್ಲಿ ಸಿಆರ್ಪಿಸಿ ಸೆಕ್ಷನ್ 200 ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಯುವ ವೇಳೆ ಎನ್ಐ ಆಕ್ಟ್ 143-ಂ ಅಡಿ ಮಧ್ಯಂತರ ಪರಿಹಾರ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಪರಿಹಾರ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಿವಿಲ್ ಕೋರ್ಟ್ 2 ಕೋಟಿ ರೂ ಚೆಕ್ ಮೊತ್ತದಲ್ಲಿ ಶೇ 20ರಷ್ಟು ಹಣವಾದ 40 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ಪಾವತಿಸುವಂತೆ ಚೆಕ್ ನೀಡಿದ್ದ ಮಹಿಳೆ/ಆರೋಪಿಗೆ ಆದೇಶಿಸಿತ್ತು. 60 ದಿನಗಳಲ್ಲಿ 40 ಲಕ್ಷ ಮಧ್ಯಂತರ ಪರಿಹಾರ ಪಾವತಿಸದೇ ಇದ್ದರೆ ದೂರದಾರರು ಸಿಆರ್ಪಿಸಿ ಸೆಕ್ಷನ್ 421 ಹಾಗೂ 357 ರ ಅಡಿ ದೂರುದಾರರು ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದಿತ್ತು. ಈ ಮೇರೆಗೆ ದೂರುದಾರರು ಮಹಿಳೆ ಆಸ್ತಿ ಜಪ್ತಿಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.