ಚೆಕ್ ಬೌನ್ಸ್ ಕೇಸ್: ಆರೋಪಿ ಖುಲಾಸೆ ವಿರುದ್ದ ಪೂರ್ವನುಮತಿ ಇಲ್ಲದೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ- ಸುಪ್ರೀಂಕೋರ್ಟ್
ನವದೆಹಲಿ: ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿ ಖುಲಾಸೆ ವಿರುದ್ಧ ದೂರುದಾರ ಪೂರ್ವಾನುಮತಿ ಇಲ್ಲದೆ ಮೇಲ್ಮನವಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ. ಚೆಕ್ ಅಮಾನ್ಯ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿತರನ್ನು ಖುಲಾಸೆಗೊಳಿಸಿದರೆ, ದೂರುದಾರ ಸಂತ್ರಸ್ತರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಫಿರ್ಯಾದಿಯವರು ಸೆಕ್ಷನ್ 372 CrPc ಅಡಿಯಲ್ಲಿ ಪೂರ್ವಾನುಮತಿ ಇಲ್ಲದೆಯೇ ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶಿಸಿದೆ.
ನೆಗೋಷಿಯೇಬಲ್ ಇನ್ಸುಮೆಂಟ್ಸ್ ಆಕ್ಟ್-1881, ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದೂರುದಾರರು ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 (CrPc) ನ ಸೆಕ್ಷನ್ 2(wa) ರ ಅರ್ಥದಲ್ಲಿ “ಸಂತ್ರಸ್ತರು” ಮತ್ತು ಸೆಕ್ಷನ್ 378(4) ರ ಅಡಿಯಲ್ಲಿ ಪೂರ್ವಾನುಮತಿ ಪಡೆಯದೆ CrpCಯ ಸೆಕ್ಷನ್ 372 ರ ನಿಬಂಧನೆಯ ಅಡಿಯಲ್ಲಿ ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
