06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಸಹಿ ವ್ಯತ್ಯಾಸವಿದ್ದರೂ ಎನ್.ಐ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಬಹುದೇ..?

ಲಡಾಖ್: ಚೆಕ್ ಅಮಾನ್ಯ ಪ್ರಕರಣದಲ್ಲಿ ಸಹಿ ವ್ಯತ್ಯಾಸವಿದ್ದರೂ ಎನ್.ಐ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಬಹುದು ಎಂದು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.

ಚೆಕ್ ಅಮಾನ್ಯ ಪ್ರಕರಣದಲ್ಲಿ ದಾಖಲಾದ ದೂರು ಹಾಗೂ ಸಮನ್ಸ್ ಆದೇಶವನ್ನು ರದ್ದುಪಡಿಸಬೇಕೆಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಧರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಚೆಕ್ ನಗದೀಕರಣವನ್ನು ತಡೆಯುವ ದುರುದ್ದೇಶದಿಂದ ಬ್ಯಾಂಕ್ ನಲ್ಲಿರುವ ಮಾದರಿ ಸಹಿಗೆ ಹೊಂದಿಕೆಯಾಗದ ಸಹಿಯನ್ನು ಹಾಕಿದರೆ, ಅಂತಹ ಸಂದರ್ಭದಲ್ಲೂ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ಚೆಕ್ ಬರೆಯುವ ವ್ಯಕ್ತಿಯು (drawer) ಉದ್ದೇಶಪೂರ್ವಕವಾಗಿ ಬ್ಯಾಂಕ್ನಲ್ಲಿರುವ ತನ್ನ ಮಾದರಿ ಸಹಿಗೆ ಹೊಂದಿಕೆಯಾಗದ ಸಹಿಯನ್ನು ಚೆಕ್ ಮೇಲೆ ಹಾಕಿ. ಚೆಕ್ ಅಮಾನ್ಯವಾಗಲು ಪ್ರಯತ್ನಿಸಿದಲ್ಲಿ, ಆಗ ಅದು ವರ್ಗಾವಣೀಯ ಪತ್ರಗಳ ಕಾಯ್ದೆ ಸೆಕ್ಷನ್ 138 ಅಡಿಯಲ್ಲಿ ಅಪರಾಧ ರೂಪುಗೊಳ್ಳುತ್ತದೆ ಎಂದು ತೀರ್ಮಾನಿಸಿದೆ.

ಚೆಕ್ ಮಾನ್ಯವಾಗುವುದನ್ನು ತಡೆಯುವ ಉದ್ದೇಶದಿಂದ ಚೆಕ್ ಬರೆಯುವ ವ್ಯಕ್ತಿಯು ಮಾಡಿದ ಯಾವುದೇ ಕೃತ್ಯ ಅಥವಾ ಲೋಪ ಇದ್ದರೆ, ಅಂಥ ಚೆಕ್ ಅಮಾನ್ಯವು ವರ್ಗಾವಣೀಯ ಪತ್ರಗಳ ಕಾಯ್ದೆ ಸೆಕ್ಷನ್ 138 ಅಡಿಯಲ್ಲಿ ಅಪರಾಧವಾಗುತ್ತದೆ. ಚೆಕ್ ನಗದೀಕರಣವನ್ನು ವಿಫಲಗೊಳಿಸಲು ಉದ್ದೇಶಿತ ಕೃತ್ಯಗಳನ್ನು ಕೈಗೊಂಡ ವ್ಯಕ್ತಿ, ಅವನ್ನೇ ತನ್ನ ವಿರುದ್ಧದ ಅಪರಾಧದಿಂದ ತಪ್ಪಿಸಿಕೊಳ್ಳಲು ಕವಚವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ಇದು ಅಬ್ದುಲ್ ಹಮೀದ್ ಲೋನ್ ಅವರು ಅಬ್ದುಲ್ ಹಮೀದ್ ವಾನಿ ವಿರುದ್ಧ ವಾಣಿಜ್ಯ ಪತ್ರಗಳ ಕಾಯ್ದೆಯ ಸೆಕ್ಷನ್ ಗಳು 138 ಮತ್ತು 142 ಅಡಿಯಲ್ಲಿ ದಾಖಲಿಸಿದ ದೂರಿನ ಪ್ರಕರಣವಾಗಿದೆ. ಆರೋಪಿಯು ತನ್ನಿಂದ 14 ಲಕ್ಷ ರೂ. ಬಾಕಿ ಇದ್ದು, ಆ ಬಾಕಿ ತೀರಿಸುವ ಸಲುವಾಗಿ ಚೆಕ್ ನೀಡಿದ್ದಾನೆ ಎಂದು ದೂರದಾರರು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಚೆಕ್ ಸಲ್ಲಿಸಿದಾಗ, “ಬದಲಾವಣೆಗಳಿಗೆ ಚೆಕ್ ಬರೆಯುವವರ ದೃಢೀಕರಣ ಅಗತ್ಯ” ಎಂಬ ಟಿಪ್ಪಣಿಯೊಂದಿಗೆ ಚೆಕ್ ಅಮಾನ್ಯಗೊಂಡಿತ್ತು. ಕಾನೂನುಬದ್ಧ ಬೇಡಿಕೆ ನೋಟಿಸ್ ನೀಡಿದರೂ ಹಣ ಪಾವತಿಯಾಗದ ಕಾರಣ ದೂರು ದಾಖಲಿಸಲಾಯಿತು. ಮ್ಯಾಜಿಸ್ಟ್ರೇಟ್ ಪ್ರಾಥಮಿಕವಾಗಿ ಪ್ರಕರಣ ಅಸ್ತಿತ್ವದಲ್ಲಿದೆ ಎಂದು ತೃಪ್ತಿಪಟ್ಟು, ಆರೋಪಿಯ ವಿರುದ್ಧ ಕ್ರಮ ಕೈಗೊಂಡರು.

ಈ ಆದೇಶ ಹಾಗೂ ದೂರನ್ನು ಪ್ರಶ್ನಿಸಿ ಅಬ್ದುಲ್ ಹಮೀದ್ ವಾನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರ ಆರೋಪಿಯ ಪರವಾಗಿ ಹಾಜರಾಗಿ ವಾದಿಸಿದ ವಕೀಲ ಮುದಾಸಿರ್ ಬಿನ್ ಹಸನ್, ವಿವಾದಿತ ಚೆಕ್ ನಕಲಿ (forged) ಆಗಿದ್ದು, ದೂರದಾರನೇ ಚೆಕ್ ಮೊತ್ತದಲ್ಲಿ ಬದಲಾವಣೆ ಮಾಡಿದ್ದಾನೆ ಎಂದು ವಾದಿಸಿದರು. ವಾಸ್ತವದಲ್ಲಿ ಬಾಕಿ ಮೊತ್ತ ರೂ. 14,000 ಮಾತ್ರ ಇದ್ದು, ಅಂಕಿ ಮತ್ತು ಪದಗಳನ್ನು ಬದಲಿಸಿ ಅದನ್ನು ರೂ. 14 ಲಕ್ಷ ಎಂದು ತೋರಿಸಲಾಗಿದೆ ಎಂದು ಹೇಳಿದರು. ಅಲ್ಲದೆ, ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಹಣದ ಕೊರತೆಯಿಂದಲ್ಲ; ದೂರದಾರನು ಮಾಡಿದ ನಕಲಿ ಬದಲಾವಣೆಗಳ ಕಾರಣದಿಂದಲೇ ಚೆಕ್ ಅನಾದರಗೊಂಡಿದೆ ಎಂದು ವಾದಿಸಿದರು.

ನ್ಯಾಯಾಲಯದ ವಿಶ್ಲೇಷಣೆ ಮತ್ತು ಗಮನಾರ್ಹ ಅಭಿಪ್ರಾಯಗಳು ನ್ಯಾಯಮೂರ್ತಿ ಧರ್, ಚೆಕ್ ಮೊತ್ತದಲ್ಲಿ ಬದಲಾವಣೆ ಇರುವ ಕಾರಣದಿಂದ ಚೆಕ್ ಅನಾದರಗೊಂಡರೆ, ಅದು ಸೆಕ್ಷನ್ 138 ಅಡಿಯಲ್ಲಿ ಅಪರಾಧವಾಗುತ್ತದೆಯೇ? ಎಂಬುದನ್ನು ಪ್ರಮುಖ ಪ್ರಶ್ನೆಯಾಗಿ ರೂಪಿಸಿದರು.

“ಹಣದ ಮೊತ್ತ ಸಾಕಾಗಿಲ್ಲ” ಎಂಬುದು ಸಾಮಾನ್ಯ ವರ್ಗ (genus) ಆಗಿದ್ದು, “ಖಾತೆ ಮುಚ್ಚಲಾಗಿದೆ”, “ಪಾವತಿ ನಿಲ್ಲಿಸಲಾಗಿದೆ”, “ಸಹಿಗಳು ಹೊಂದಿಕೆಯಾಗುತ್ತಿಲ್ಲ’ ಮುಂತಾದ ಕಾರಣಗಳು ಅದೇ ವರ್ಗದ ಉಪಪ್ರಕಾರಗಳು (species) ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚೆಕ್ ಅನಾದರವಾಗಲು ಉದ್ದೇಶಪೂರ್ವಕವಾಗಿ ಚೆಕ್ ಬರೆಯುವವರು ಕೈಗೊಂಡ ಕೃತ್ಯಗಳು ಅಥವಾ ಲೋಪಗಳು, ಪ್ರಕರಣವನ್ನು ಸೆಕ್ಷನ್ 138ರ ವ್ಯಾಪ್ತಿಯಿಂದ ಹೊರಗೆ ತಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಿರಂತರವಾಗಿ ಗುರುತಿಸಿರುವುದನ್ನು ಹೈಕೋರ್ಟ್ ಗಮನಿಸಿತು.

ಮಾದರಿ ಸಹಿಯನ್ನು ಬದಲಿಸುವುದು, ಸೂಚನೆಗಳನ್ನು ತಿದ್ದುಪಡಿ ಮಾಡುವುದು ಅಥವಾ ಸಹಿ ಹೊಂದಿಕೆಯಾಗದಂತೆ ಮಾಡುವುದು ಇವೆಲ್ಲವೂ ಚೆಕ್ ಮಾನ್ಯವಾಗುವುದನ್ನು ತಡೆಯುವ ಉದ್ದೇಶಿತ ಕ್ರಮಗಳಾಗಿವೆ ಎಂದು ನ್ಯಾಯಪೀಠ ಹೇಳಿತು. “ಚೆಕ್ ಮಾನ್ಯವಾಗುವುದನ್ನು ತಡೆಯುವ ಉದ್ದೇಶದಿಂದ ಬದಲಾವಣೆ ಮಾಡಿದ್ದರೆ, ಅಂಥ ಅಮಾನ್ಯತೆ ಸೆಕ್ಷನ್ 138 ಅಡಿಯಲ್ಲಿ ಅಪರಾಧವಾಗುತ್ತದೆ,” ಎಂದು ನ್ಯಾಯಾಲಯ ಒತ್ತಿ ಹೇಳಿದ್ದು ಅರ್ಜಿಯನ್ನು ವಜಾಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.