ಚೆಕ್ ಬೌನ್ಸ್ ಕೇಸ್: ಆರೋಪಿ ಅನುಪಸ್ಥಿತಿಯಲ್ಲಿ ಕ್ರಿಮಿನಲ್ ವಿಚಾರಣೆ ಸಾಧ್ಯವಿಲ್ಲ – ಹೈಕೋರ್ಟ್
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿ ಗೈರು ಹಾಜರಿದ್ದಾಗ ಪ್ರಕರಣವನ್ನು ಏಕಪಕ್ಷೀಯ(ಎಕ್ಸ್ಪಾರ್ಟೆ) ಎಂದು ಘೋಷಿಸಿ ವಿಚಾರಣೆ ಮುಂದುವರೆಸಲು ಮತ್ತು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಶಿವಮೊಗ್ಗದ ಅಬ್ದುಲ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿ ಗೈರು ಹಾಜರಿದ್ದಾಗ ಪ್ರಕರಣವನ್ನು ಏಕಪಕ್ಷೀಯ(ಎಕ್ಸ್ಪಾರ್ಟೆ) ಎಂದು ಘೋಷಿಸಿ ವಿಚಾರಣೆ ಮುಂದುವರೆಸಲು ಮತ್ತು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಆರೋಪಿಯ ಅನುಪಸ್ಥಿತಿಯಲ್ಲಿ ಕ್ರಿಮಿನಲ್ ವಿಚಾರಣೆ ನಡೆಸಲಾಗದು. ವಿಚಾರಣಾ ನ್ಯಾಯಾಲಯವು ಆರೋಪಿಗೆ ಸಮನ್ಸ್ ಜಾರಿಗೊಳಿಸಿದ ಬಳಿಕವೂ ಆತ ಗೈರುಹಾಜರಾದರೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿರುವ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಬೇಕು. ಅದರ ಬದಲಿಗೆ ಪ್ರಕರಣವನ್ನು ಏಕಪಕ್ಷೀಯ ಎಂದು ಘೋಷಿಸಿ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಬಾರದು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಉಡುಪಿಯ ಮೊಹಮ್ಮದ್ ಇಕ್ಯಾಲ್ ಎಂಬುವರು ಶಿವಮೊಗ್ಗದ ಆಗುಂಬೆಯ ಅಬ್ದುಲ್ ಎಂಬುವರ ವಿರುದ್ಧ 6 ಚೆಕ್ ಬೌನ್ಸ್ ಕೇಸ್ ಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಆರೋಪಿಯ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ಮುಗಿಸಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುರಸ್ಕರಿಸಿತ್ತು.
ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಉಡುಪಿಯ ಜೆ.ಎಂ.ಎಫ್.ಸಿ ನ್ಯಾಯಾಲಯ ತಮಗೆ ವಿಧಿಸಿರುವ ಶಿಕ್ಷೆ ಹಾಗೂ ಆ ತೀರ್ಪನ್ನು ಎತ್ತಿ ಹಿಡಿದಿರುವ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿ ಕರ್ನಾಟಕ ಹೈಕೋರ್ಟ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಜೆಎಂಎಫ್ಸಿ ನ್ಯಾಯಾಲಯವು ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೇ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದೆ. ಈ ಆದೇಶವನ್ನು ಸೆಷನ್ಸ್ ಕೋರ್ಟ್ ಕೂಡ ಸರಿಯಾಗಿ ಪರಿಶೀಲಿಸದೇ ಪುರಸ್ಕರಿಸಿದೆ. ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕೂಡ ಅರ್ಥೈಸಿಕೊಳ್ಳುವಲ್ಲಿ ವಿಚಾರಣಾ ನ್ಯಾಯಾಲಯಗಳು ವಿಫಲವಾಗಿವೆ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 299ರ ಸಂದರ್ಭಗಳ ಹೊರತಾಗಿ ಸೆಕ್ಷನ್ 273 ರ ಪ್ರಕಾರ ಆರೋಪಿ ಎದುರಲ್ಲೇ ವಿಚಾರಣಾ ಪ್ರಕ್ರಿಯೆ ನಡೆಯಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆರೋಪಿಯ ಅಥವಾ ಆರೋಪಿ ಪರ ವಕೀಲರ ಗೈರು ಹಾಜರಿಯಲ್ಲಿ ಸಾಕ್ಷ್ಯಗಳನ್ನು ದಾಖಲಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸದರಿ ಪ್ರಕರಣದಲ್ಲಿ ಆರೋಪಿ ಗೈರುಹಾಜರಾಗಿದ್ದಾರೆ. ಅವರನ್ನು ನ್ಯಾಯಾಯದ ಮುಂದೆ ಹಾಜರುಪಡಿಸುವಂತಹ ಯಾವುದೇ ಕ್ರಮಗಳನ್ನು ವಿಚಾರಣಾ ನ್ಯಾಯಾಲಯ ಕೈಗೊಂಡಂತೆ ಕಾಣುವುದಿಲ್ಲ. ಮಾನ್ಯ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕೂಡ ವಿಚಾರಣಾ ನ್ಯಾಯಾಲವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಕಾನೂನು ಪ್ರಕ್ರಿಯೆಗಳನ್ನು ಕೈಬಿಟ್ಟು ಅರ್ಜಿದಾರರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುವ ವಿಚಾರಣಾ ನ್ಯಾಯಾಯಗಳ ಕ್ರಮ ನಿಯಮಬಾಹಿರ ಎಂದು ತೀರ್ಪಿನಲ್ಲಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
