06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ರಾಜಿ ದಾಖಲಾದ ನಂತರ ರಾಜಿ ಆದೇಶವನ್ನು ಮ್ಯಾಜಿಸ್ಟ್ರೇಟ್ ಜಾರಿಗೊಳಿಸಲು ಸಾಧ್ಯವಿಲ್ಲ- ಹೈಕೋರ್ಟ್

ಲಡಾಖ್: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜಿ ದಾಖಲಾದ ನಂತರ ರಾಜಿ ಆದೇಶವನ್ನು ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಕ್ರಿಮಿನಲ್ ಪ್ರಕ್ರಿಯೆಯನ್ನು ಬಲವಂತದ ಕ್ರಮದಿಂದ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೆಚ್ಚುವರಿ ವಿಶೇಷ ಮೊಬೈಲ್ ಮ್ಯಾಜಿಸ್ಟ್ರೇಟ್, ಬೀರವಾಹ್ ಅವರು ನೀಡಿದ ಆದೇಶವನ್ನು ಪ್ರಶ್ನಿಸಿ ಸಜಾದ್ ಅಹಮದ್ ಮಲಿಕ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಧರ್ ಅವರು ಈ ತೀರ್ಪು ನೀಡಿದಾರೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಸೆಕ್ಷನ್ 138 ಅಡಿಯಲ್ಲಿ ದಾಖಲಾದ ದೂರಿನಲ್ಲಿ ಕಾನೂನುಬದ್ಧವಾದ ರಾಜಿ (ಕಾಂಪ್ರಮೈಸ್) ದಾಖಲಾದ ನಂತರ, ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಆ ರಾಜಿಯ ಪ್ರಕಾರವೇ ದೂರನ್ನು ಅಂತಿಮವಾಗಿ ವಿಲೇವಾರಿ ಮಾಡಬೇಕಾಗಿದೆ. ಜಾರಿಗೆ ತರುವ ಉದ್ದೇಶದಿಂದ ಕ್ರಿಮಿನಲ್ ಪ್ರಕ್ರಿಯೆ ನಡೆಸಲು ಅಥವಾ ಬಲವಂತದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಎನ್ ಐ ಕಾಯ್ದೆಯ ಸೆಕ್ಷನ್ 138 ಅಡಿಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಪಕ್ಷಕಾರರ ನಡುವೆ ಈಗಾಗಲೇ ರಾಜಿ ನಡೆದು ನ್ಯಾಯಾಲಯದ ಮುಂದೆ ದಾಖಲಾಗಿದ್ದರೂ, ಮ್ಯಾಜಿಸ್ಟ್ರೇಟ್ ಅವರು ತಮ್ಮ ನ್ಯಾಯಾಧಿಕಾರ ಮೀರಿ ಕ್ರಮ ಕೈಗೊಂಡಿದ್ದಾರೆ ಎಂದು ಅರ್ಜಿದಾರ ಪರ ವಕೀಲರು ವಾದಿಸಿದರು.

ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಪ್ರತಿವಾದಿ ಅರ್ಜಿದಾರರಿಂದ ನೀಡಲಾದ ಚೆಕ್ ಮಾನ್ಯವಾಗದೆ ತಿರಸ್ಕೃತವಾಗಿದೆ ಎಂಬ ಆರೋಪದ ಮೇರೆಗೆ ದೂರು ಸಲ್ಲಿಸಿದ್ದಾರೆ ಎಂದು ಗಮನಿಸಿತು. ದೂರು ಬಾಕಿಯಿರುವ ಅವಧಿಯಲ್ಲಿ ಪಕ್ಷಗಳು ರಾಜಿ ಪತ್ರಕ್ಕೆ ಸಹಿ ಹಾಕಿದ್ದರು.

ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು 06.11.2024 ರಂದು ರಾಜಿಯನ್ನು ಸಮರ್ಥಿಸಿಕೊಂಡ ಉಭಯ ಪಕ್ಷಕಾರರ ಹೇಳಿಕೆಗಳನ್ನು ದಾಖಲಿಸಿದ್ದರು. ಆದರೆ, ಹೈಕೋರ್ಟ್ ಗಮನಿಸಿದಂತೆ, ರಾಜಿಯ ಪ್ರಕಾರ ದೂರನ್ನು ವಿಲೇವಾರಿ ಮಾಡುವ ಬದಲು, ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ರಾಜಿಯ ಷರತ್ತುಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡುತ್ತಾ, ಪರಿಣಾಮವಾಗಿ ಜಾರಿಗೆ ತರುವ ನ್ಯಾಯಾಲಯದಂತೆ ಕಾರ್ಯನಿರ್ವಹಿಸಿದ್ದಾರೆ. ನ್ಯಾಯಮೂರ್ತಿ ಧರ್ ಅವರು ಈ ರೀತಿಯ ಕ್ರಮ ಕಾನೂನಾತ್ಮಕವಾಗಿ ಸ್ಥಿರವಲ್ಲ ಎಂದು ತೀರ್ಮಾನಿಸಿದರು.

“ರಾಜಿಯ ಪ್ರಕಾರ ದೂರನ್ನು ವಿಲೇವಾರಿ ಮಾಡುವ ಬದಲು, ಪ್ರಾಜ್ಯ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಅರ್ಜಿದಾರರಿಂದ ರಾಜಿಯ ಷರತ್ತುಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಅಮಲ್ನಾರಿ ನ್ಯಾಯಾಲಯದಂತೆ ಕಾರ್ಯನಿರ್ವಹಿಸಿದ್ದಾರೆ.” ಚಲಾವಣೆ ಯೋಗ್ಯ ದಸ್ತಾವೇಜುಗಳ ಅಧಿನಿಯಮದ ಅಡಿಯಲ್ಲಿ ದಾಖಲಾದ ದೂರಿನ ವಿಚಾರಣೆಗೆ ಸಂಬಂಧಿಸಿದ ಕ್ರಿಮಿನಲ್ ಕಾನೂನು ವ್ಯವಸ್ಥೆಗೆ ಇಂತಹ ಪ್ರಕ್ರಿಯೆ ಸಂಪೂರ್ಣವಾಗಿ ಅನ್ಯವಾಗಿದೆ ಎಂದು ನ್ಯಾಯಪೀಠ ಒತ್ತಿ ಹೇಳಿತು. “ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ರಾಜಿಯ ಷರತ್ತು ಪ್ರಕಾರ ದೂರನ್ನು ವಿಲೇವಾರಿ ಮಾಡಬೇಕಾಗಿತ್ತು. ನಂತರವೂ ಅರ್ಜಿದಾರರು ರಾಜಿಯ ಷರತ್ತುಗಳನ್ನು ಪಾಲಿಸದಿದ್ದಲ್ಲಿ, ಪ್ರತಿವಾದಿಗೆ ಜಾರಿಗೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಲು ಸ್ವಾತಂತ್ರ ನೀಡಬೇಕಾಗಿತ್ತು.”

ಅಂತಹ ಜಾರಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ ನಂತರ ಮಾತ್ರ ಮ್ಯಾಜಿಸ್ಟ್ರೇಟ್ ಅವರು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 421 ರಲ್ಲಿ ಒಳಗೊಂಡಿರುವ ವಿಧಾನದ ಮೂಲಕ ಅರ್ಜಿದಾರರ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಿದೆ. ರಾಜಿ ದಾಖಲಾಗಿದ್ದು ಅಂಗೀಕರಿಸಲಾದ ನಂತರ, ಅದನ್ನು ಜಾರಿಗೆ ತರುವ ಉದ್ದೇಶದಿಂದ ಕ್ರಿಮಿನಲ್ ನ್ಯಾಯಾಲಯಗಳು ಮುಂದುವರೆದು ಕ್ರಿಮಿನಲ್ ಪ್ರಕ್ರಿಯೆ ನಡೆಸಲು ಅಥವಾ ಬಲವಂತದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಅರ್ಜಿಯನ್ನು ವಿಲೇವಾರಿ ಮಾಡಿದ ಹೈಕೋರ್ಟ್, ನ್ಯಾಯಾಲಯ ಸೂಚಿಸಿದ ರೀತಿಯಲ್ಲೇ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರಾಜ್ಯ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದಿಷ್ಟ ನಿರ್ದೇಶನ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.