ಚೆಕ್ ಬೌನ್ಸ್ ಕೇಸ್ : ತೀರ್ಪು ನೀಡುವಾಗ ಮುಂದಣ ಬಡ್ಡಿ ಪಾವತಿಗೂ ಆದೇಶಿಸಿ – ಹೈಕೋರ್ಟ್
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ತೀರ್ಪು ನೀಡುವಾಗ ಮುಂದಣ ಬಡ್ಡಿ ಪಾವತಿಗೂ ಆದೇಶ ಮಾಡಬೇಕು. ವಿಚಾರಣೆ ವಿಳಂಬ ಮಾಡುವ ಆರೋಪಿಗಳಿಂದ ದೂರುದಾರರಿಗೆ ಈ ಮೂಲಕ ರಕ್ಷಣೆ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
“ಬನವತಿ ಆಂಡ್ ಕಂಪೆನಿ ವಿರುದ್ಧ ಮಹಈರ್ ಎಲೆಕ್ಟೋ ಮೆಷ್ ಪ್ರೈ.ಲಿ. ಮತ್ತಿತರರು” ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪನ್ನು ಖಾಯಂಗೊಳಿಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮೇಲಿನ ನಿರ್ದೇಶನ ನೀಡಿದೆ.
ಪ್ರಕರಣದ ವಿವರ
ಆರೋಪಿ ಸಂಸ್ಥೆಯು 2007ರಲ್ಲಿ ಹರದನಹಳ್ಳಿ ಮತ್ತು ಭೇರಿಯಾ ಸಬ್ ಸ್ಟೇಷನ್ ಗೆ ವಿದ್ಯುತ್ ಶಕ್ತಿಗೆ ಸಂಬಂಧಿಸಿದ ಬ್ಯಾಟರಿ ಚಿಪ್ ಗಳನ್ನು ಪೂರೈಸುವಂತೆ ಫಿರ್ಯಾದಿ ಸಂಸ್ಥೆಗೆ ಮನವಿ ಮಾಡಿತ್ತು. ಅದರಂತೆ, 03-08-2009ರಂದು ಸುಮಾರು 5.68 ಲಕ್ಷ ರೂ. ಮೌಲ್ಯದ ಸೊತ್ತನ್ನುಫಿರ್ಯಾದಿ ಸಂಸ್ಥೆ ಪೂರೈಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಆರೋಪಿ ಸಂಸ್ಥೆ ನೀಡಿದ್ದ ಎರಡು ಚೆಕ್ಗಳು ಅಮಾನ್ಯಗೊಂಡಿತ್ತು. ಈ ಸಂಬಂಧ, ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ಫಿರ್ಯಾದಿ ಸಂಸ್ಥೆ ಆರೋಪಿ ಸಂಸ್ಥೆ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿತ್ತು. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಸಂಸ್ಥೆಗೆ 7.10 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಂಸ್ಥೆ ಸೆಷನ್ಸ್ ಕೋರ್ಟ್ಗೆ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿತ್ತು. ಸೆಷನ್ಸ್ ನ್ಯಾಯಾಲಯ ಈ ಶಿಕ್ಷೆಯನ್ನು ಎತ್ತಿಹಿಡಿದರೂ ಪರಿಹಾರದ ಮೊತ್ತವನ್ನು 7.10 ಲಕ್ಷ ರೂಗಳಿಂದ 4.67 ಲಕ್ಷ ರೂ.ಗಳಿಗೆ ಇಳಿಸಿತ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಫಿರ್ಯಾದಿ ಸಂಸ್ಥೆ ಹೈಕೋರ್ಟ್ ನಲ್ಲಿ ಪುನರ್ ವಿಮರ್ಶಾ ಅರ್ಜಿಯನ್ನು ಸಲ್ಲಿಸಿತ್ತು. ಇದೊಂದು ವಾಣಿಜ್ಯ ವ್ಯವಹಾರವಾಗಿದ್ದು ಪರಿಹಾರದ ಮೊತ್ತವನ್ನು ಇಳಿಸಿದ ಕ್ರಮ ಸರಿಯಲ್ಲ ಎಂದು ವಾದಿಸಿತು.
ಆರ್.ವಿಜಯನ್ ವಿರುದ್ಧ ಬೇಬಿ (AIR 2012 SC 528), ಸತ್ಯನ್ ಅಯ್ಯಪ್ಪ ಸತ್ಯನ್ ವಿರುದ್ದ ಯೂಸು ಮತ್ತು ಇತರರು (2007 CrILJ 2590) ಕೇರಳ ಹೈಕೋರ್ಟ್ Crl.Rev.P. 844/2011 ಹಾಗೂ ದಿನಾಂಕ 04-06-2025ರಂದು ಕರ್ನಾಟಕ ಹೈಕೋರ್ಟ್ ಎ.ವಿ. ಪೂಜಪ್ಪ ವಿರುದ್ಧ ಡಾ. ಎಸ್.ಕೆ. ವಾಗೋವಿ (Crl.R.P. 13/2020) ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ಫಿರ್ಯಾದಿ ವಕೀಲರು, ಸೆಷನ್ಸ್ ನ್ಯಾಯಾಲಯ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವುದಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ ಎಂದು ವಾದಿಸಿದರು.
ನೆಗೋಷಿಯೇಬಲ್ ಇನ್ಸ್ ಮೆಂಟ್ಸ್ ಕಾಯ್ದೆಯು ಪರಿಹಾರದ ಮೊತ್ತವನ್ನು ಹೇಗೆ ಘೋಷಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಯಮ ರೂಪಿಸಿಲ್ಲ. ಇದು ವಿಚಾರಣಾ ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ. ಆದರೂ, ಕಾಲ ವಿಳಂಬ ಮಾಡುವ ಆರೋಪಿಯಿಂದ ಫಿರ್ಯಾದಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಈ ಬಗ್ಗೆ ಎ.ವಿ. ಪೂಜಪ್ಪ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ನಿಗದಿಪಡಿಸಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಈ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗಿರಿಸಿ ವಿಚಾರಣಾ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
