07/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಅವಧಿ ಪೂರ್ಣ ಕೇಸ್ ದಾಖಲಿಸಿದ ಫಿರ್ಯಾದಿಗೆ ಪರಿಹಾರ: ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ನೋಟೀಸ್ ಜಾರಿ ಅಥವಾ ನೋಟೀಸ್ ಸೇವೆಯ ದಿನದಿಂದ 15 ದಿನಗಳಿಗೆ ಮುನ್ನವೇ ಪ್ರಕರಣ ದಾಖಲಿಸಿದರೆ ಈ ಪ್ರಕರಣ ತಾಂತ್ರಿಕ ಕಾರಣದಿಂದ ವಜಾಗೊಳ್ಳುತ್ತದೆ. ಇಂತಹ ಪ್ರಕರಣದಲ್ಲಿ ಫಿರ್ಯಾದಿಗೆ ಪರಿಹಾರವೇನು ಎಂಬ ವಿಷಯವನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಮೇಲ್ಮನವಿಯನ್ನು ‘ವಜಾಗೊಳಿಸಿದ್ದರಿಂದ ಆರ್ಮುಗಂ ಎಂಬುವವರು ಹೈಕೋರ್ಟ್ ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರ ಪೀಠ, ಫಿರ್ಯಾದಿಗೆ ಚೆಕ್ ಅಮಾನ್ಯ ಪ್ರಕರಣ ದಾಖಲಿಸಲು ಮತ್ತೊಂದು ಅವಕಾಶವನ್ನು ನೀಡುವ ಮೂಲಕ ಪರ್ಯಾಯ ಕಲ್ಪಿಸಿದೆ. ಪ್ರಕರಣದಲ್ಲಿ ದೂರುದಾರರಾದ ಆನಂದ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ನೋಟಿಸ್ ಸೇವೆಯ ದಿನಾಂಕದಿಂದ 15 ದಿನಗಳ ಅವಧಿ ಮುಗಿಯುವ ಮೊದಲೇ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಅರುಮುಗಂ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿಯನ್ನು ತಿರಸ್ಕರಿಸಿದ ಸೆಷನ್ಸ್ ಕೋರ್ಟ್, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.

ಇದರಿಂದ ಬಾಧಿತರಾದ ಅರ್ಜಿದಾರರು, ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಇದು ಅವಧಿಪೂರ್ವ ಫಿರ್ಯಾದು ಆಗಿದ್ದು, ವ್ಯಾಜ್ಯ ಕಾರಣದ ಕಾಲಮಿತಿಗೆ ಮುನ್ನವೇ ಈ ದೂರನ್ನು ಸಲ್ಲಿಸಿರುವುದರಿಂದ ಈ ದೂರು ನಿರ್ವಹಣೆಗೆ ಯೋಗ್ಯವಲ್ಲ ಎಂದು ಅವರು ವಾದಿಸಿದ್ದರು.

ನೋಟಿಸ್ ಸೇವೆಯ ದಿನಾಂಕದಿಂದ 15 ದಿನಗಳ ಅವಧಿ ಮುಗಿಯುವ ಮೊದಲು ಸಲ್ಲಿಸಲಾದ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ (NI) ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ದೂರನ್ನು ಕಾನೂನಿನ ದೃಷ್ಟಿಯಲ್ಲಿ ಮಾನ್ಯ ದೂರಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.

ಆದರೆ, ತಾಂತ್ರಿಕ ದೋಷದ ಕಾರಣಕ್ಕೆ ಆರೋಪಿ ತಪ್ಪಿಸಿಕೊಳ್ಳುವಂತಾಗುತ್ತದೆ. ಇದನ್ನು ತಪ್ಪಿಸಲು ಫಿರ್ಯಾದಿಗೆ ದೂರನ್ನು ಸಲ್ಲಿಸಲು ಮತ್ತೊಂದು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು.

ಸಾಲಗಾರ ಲೀಗಲ್ ನೋಟಿಸ್ ಸ್ವೀಕರಿಸಿದ 15 ದಿನದ ಒಳಗೆ ಸಾಲ ನೀಡಿದಾತ ದಾಖಲಿಸಿದ ದೂರಿಗೆ ಮಾನ್ಯತೆ ಇರುವುದಿಲ್ಲ. 15 ದಿನ ಮುಗಿದ ನಂತರದ ಒಂದು ತಿಂಗಳಲ್ಲಿ ಚೆಕ್ ಬೌನ್ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶವಿದೆ ಎ0ದು ನ್ಯಾಯಪೀಠ ಆದೇಶಿಸಿದೆ.

Yogendra Pratap Singh Vs Savitri Pandey ಪ್ರಕರಣದಲ್ಲಿ (2015) AIR (SC) 157 : ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿತು. ಅದೇ ರೀತಿ, ಆ ಬಳಿಕ, 2022 LiveLaw (SC) 682 ರಲ್ಲಿ ವರದಿಯಂತೆ Gajanand Burange Vs. Laxmi Chand Goyal ಪ್ರಕರಣದಲ್ಲೂ ಇದೇ ರೀತಿಯ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದು. ಫಿರ್ಯಾದಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂದು ಪರಿಗಣಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.

ಒಂದು ತಿಂಗಳೊಳಗೆ ದೂರನ್ನು ಸಲ್ಲಿಸಲು ಎದುರುದಾರರಿಗೆ ಅವಕಾಶ ನೀಡಿದ್ದು. ಈ ಫಿರ್ಯಾದನ್ನು ದಾಖಲಿಸಿಕೊಂಡ ವಿಚಾರಣಾ ನ್ಯಾಯಾಲಯ ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ ಆರು ತಿಂಗಳೊಳಗೆ ಸೂಕ್ತ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಹೊಂಗಸಂದ್ರ ನಿವಾಸಿ ಆರ್ಮುಗಂ (38) ವ್ಯಾಪಾರಕ್ಕೆಂದು ದೊಡ್ಡ ತೋಗೂರು ನಿವಾಸಿ ಆನಂದ್ ಎಂಬುವರಿಂದ ಒಂದು ಲಕ್ಷ ರೂ. ಸಾಲ ಪಡೆದಿದ್ದರು. 2015ರ ಡಿ.10ರಂದು ಹಣ ಹಿಂದಿರುಗಿಸುವುದಾಗಿ ಖಾತರಿ ನೀಡಿ ಚೆಕ್ ನೀಡಿದ್ದರು. ಈ ಮಧ್ಯೆ ಆನಂದ್ ಚೆಕ್ ಅನ್ನು ಬ್ಯಾಂಕಿ ಹಾಕಿದಾಗ ಬೌನ್ಸ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಆನಂದ್ 2016ರ ಜನವರಿ 13ರಂದು ನಗರದ 19ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್-1881 ರ(ಎನ್ಐ ಆಕ್ಟ್) ಸೆಕ್ಷನ್ 138 ಪ್ರಕಾರ ಚೆಕ್ಬೌನ್ಸ್ ಅಪರಾಧದಡಿ ಆರ್ಮುಗಂ ಅನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. ಜೊತೆಗೆ, 1.75 ಲಕ್ಷ ರು. ಪಾವತಿಸಬೇಕು ಅಥವಾ 6 ತಿಂಗಳು ಸಾಧಾರಣ ಜೈಲು ಅನುಭವಿಸಬೇಕು ಎಂದು ಆರೋಪಿಗೆ ನಿರ್ದೇಶಿಸಿ 2017ರ ಏಪ್ರಿಲ್ 3ರಂದು ತೀರ್ಪು ನೀಡಿತ್ತು. ಈ ಆದೇಶ ರದ್ದು ಕೋರಿ ಆರ್ಮುಗಂ ಸೆಷನ್ಸ್ ನ್ಯಾಯಾಲಯ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ಸೆಷನ್ಸ್ ನ್ಯಾಯಾಲಯ ಮೇಲ್ಮನವಿಯನ್ನು ‘ವಜಾಗೊಳಿಸಿದ್ದರಿಂದ ಆರ್ಮುಗಂ ಹೈಕೋರ್ಟ್ ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.