07/03/2026

Law Guide Kannada

Online Guide

ನಾಪತ್ತೆಯಾದವರನ್ನು ಹುಡುಕದೆ ‘ಮಿಸ್ಸಿಂಗ್ ಕೇಸ್’ ಮುಕ್ತಾಯ: ಹೈಕೋರ್ಟ್ ಕಳವಳ

ಬೆಂಗಳೂರು: ನಾಪತ್ತೆಯಾದವರನ್ನು ಸರಿಯಾಗಿ ಹುಡುಕದೆ ಮಿಸ್ಸಿಂಗ್ ಕೇಸ್ ಅನ್ನು ಮುಕ್ತಾಯಗೊಳಿಸಿದ ಆರೋಪ ಪೊಲೀಸ್ ಇಲಾಖೆಯ ಮೇಲೆ ಕೇಳಿ ಬಂದಿದ್ದು ಈ ಕುರಿತು ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ನಾಪತ್ತೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನಗರದ ಹಿರಿಯ ನಾಗರಿಕ ಮಹೇಶ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ‘ನಾಪತ್ತೆಯಾದವರನ್ನು ಸರಿಯಾಗಿ ಹುಡುಕದೇ ಮಿಸ್ಸಿಂಗ್ ಪ್ರಕರಣ ಮುಕ್ತಾಯಗೊಳಿಸಲಾಗುತ್ತಿದೆ’ ಎಂಬ ಆರೋಪವನ್ನ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠವು, ಈ ಕುರಿತು ಪೊಲೀಸ್ ಇಲಾಖೆಯಿಂದ ವಿವರಣೆ ಪಡೆದು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಕುಮಾರ್ ಎಂಬುವರು ನಾಪತ್ತೆಯಾಗಿದ್ದಾರೆ ಎಂದು ಮಹೇಶ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ನಾಪತ್ತೆಯಾದವರನ್ನು ಹುಡುಕದೇ ಮಿಸ್ಸಿಂಗ್ ಕೇಸ್ ಮುಕ್ತಾಯಗೊಳಿಸಿದ್ದಾರೆ. ಇದು ಪೊಲೀಸರ ಕಾರ್ಯ ವೈಖರಿಗೆ ಒಂದು ಉದಾಹರಣೆಯಷ್ಟೇ’ ಎಂದು ವಾದಿಸಿದರು.

ಅಲ್ಲದೆ ‘ಇದೇ ರೀತಿ ಬಹುತೇಕ ನಾಪತ್ತೆ ಪ್ರಕರಣಗಳನ್ನು ಪೊಲೀಸರು ಮುಕ್ತಾಯ ಮಾಡುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಪ್ರತಿ 8 ನಿಮಿಷಕ್ಕೆ ಒಬ್ಬರು ನಾಪತ್ತೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ, ಪೊಲೀಸರು ಅಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ಸಮಗ್ರ ತನಿಖೆ ಕೈಗೊಳ್ಳದೆ ನ್ಯಾಯಾಲಯಗಳಿಗೆ ಸರಿಯಾದ ವರದಿಗಳನ್ನು ಸಲ್ಲಿಸುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾಣೆಯಾದವರನ್ನು ಹುಡುಕದೇ ಪೊಲೀಸರು ಕೇಸ್ ಮುಕ್ತಾಯಗೊಳಿಸುತ್ತಿರುವುದೇಕೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಅಲ್ಲದೆ ಈ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.