06/03/2026

Law Guide Kannada

Online Guide

ನ್ಯಾಯಾಂಗ ನಿಂದನೆ ಆರೋಪ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಪೌರ ನೌಕರರ ಸೇವೆ ಖಾಯಮಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ದ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು ಈ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯ ಮತ್ತು ನ್ಯಾಯಮೂರ್ತಿ ಎಂಐ ಅರುಣ್ ಅವರಿಂದ ವಿಭಾಗಿಯ ನ್ಯಾಯ ಪೀಠ ಈ ನೋಟಿಸ್ ಜಾರಿಗೊಳಿಸಿದ್ದು, ಇದೀಗ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.

ಪೌರ ಕಾರ್ಮಿಕರು, ವಿವಿಧ ಸಂಘಟನೆಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ನ್ಯಾಯಪೀಠ ರಾಜ್ಯ ಸರ್ಕಾರ ಮತ್ತು ವಿವಿಧ ಇಲಾಖಾ ಮುಖ್ಯ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದೆ.

ಹಲವು ದಶಕಗಳಿಂದ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ನೌಕರರು ಮತ್ತು ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ನ್ಯಾಯಾಲಯ ಹೊರಡಿಸಿರುವ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದೆ. 2023ರ ಜೂನ್ 19ರಂದು ಹೈಕೋರ್ಟ್ ನ ಏಕ ಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶದ ಅನ್ವಯ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸದೆ. ನ್ಯಾಯಾಂಗ ನಿಂದನೆಯನ್ನು ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ನಿವೃತ್ತ ಪೌರ ನೌಕರರು ಮತ್ತು ಪೌರಕಾರ್ಮಿಕರ ಸಂಘ ಹಾಗೂ ವಿವಿಧ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ನ್ಯಾಯಾಂಗ ನಿಂದನೆಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ನ್ಯಾಯ ಪೀಠವು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಿಬ್ಬಂದಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶಕರನ್ನು ಪಕ್ಷಕಾರರನ್ನಾಗಿ ಮಾಡಲಾಗಿದ್ದು ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಎರಡು ಮೂರು ದಶಕಗಳಿಂದ ರಾಜ್ಯದ ವಿವಿಧ ನಗರ ಸಭೆ ಮತ್ತು ಪುರಸಭೆಗಳಲ್ಲಿ ಕೆಲಸ ಮಾಡುತ್ತಿರುವ ಪಂಪ್ ಆಪರೇಟರ್ಸ್, ಬಿಲ್ ಕಲೆಕ್ಟರ್, ದ್ವಿತೀಯ ದರ್ಜೆ ಸಹಾಯಕರು, ಟೈಪಿಸ್ಟ್, ದಫೇದಾರ್, ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನೌಕರರು, ರಾಜ್ಯ ನಿವೃತ್ತ ಪೌರ ನೌಕರರು ಮತ್ತು ಪೌರಕಾರ್ಮಿಕರ ಸಂಘಟನೆಗಳು 2023ರಲ್ಲಿ ಹೈಕೋರ್ಟಿಗೆ ಈ ಅರ್ಜಿಯನ್ನು ಸಲ್ಲಿಸಿದರು. ನಾವು ಕಳೆದ ಎರಡು ಮೂರು ದಶಕಗಳಿಂದ ಸರ್ಕಾರದ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ಸೇವೆಯನ್ನು ಸರಕಾರ ಖಾಯಂಗೊಳಿಸಿಲ್ಲ “ಪ್ರೇಮ್ ಸಿಂಗ್ ವರ್ಸಸ್ ಉತ್ತರಪ್ರದೇಶ ಪ್ರಕರಣ” ಹಾಗೂ “ಕರ್ನಾಟಕ ಸರಕಾರ ವರ್ಸಸ್ ಉಮಾದೇವಿ ಪ್ರಕರಣ”ದಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ತೀರ್ಪಿನ ಅನ್ವಯ ತಮ್ಮ ಸೇವೆಯನ್ನು ಖಾಯಂ ಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಂಘಟನೆಗಳು ಈ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಈ ಅರ್ಜಿಯನ್ನು 2023ರ ಜೂನ್ 19ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಈ ಎಸ್ ಇಂದಿರೇಶ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರರ ನೌಕರರನ್ನು ಸೇವಾ ಖಾಯಂ ವಿಚಾರದಲ್ಲಿ ನೌಕರರು ಖಾಯಂ ನಿರ್ವಹಿಸುತ್ತಿರುವ ನಗರ ಮತ್ತು ಪುರಸಭೆ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕಳುಹಿಸಿರುವ ವರದಿಯನ್ನು ಪೌರಾಡಳಿತ ಇಲಾಖೆ ನಿರ್ದೇಶಕರು ಪರಿಗಣಿಸಬೇಕು ಎಂದು ಅದೇಶಿಸಿತ್ತು. ಅರ್ಜಿದಾರ ನೌಕರರು ಮತ್ತೊಮ್ಮೆ ಅಗತ್ಯ ದಾಖಲೆಗಳು ಮತ್ತು ಸುಪ್ರೀಂಕೋರ್ಟಿನ ತೀರ್ಪಿನ ಪ್ರತಿಯ ಜೊತೆಗೆ ತಮ್ಮ ಸೇವೆ ಖಾಯಂಗೊಳಿಸುವಂತೆ ಕೋರಿ ಕರ್ನಾಟಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.

ಇದೀಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ನೌಕರರು ಏಕ ಸದಸ್ಯ ನ್ಯಾಯ ಪೀಠದ ಆದೇಶದಂತೆ ತಾವು ಮನವಿ ಸಲ್ಲಿಸಿದ್ದರೂ, ಅದನ್ನು ಪರಿಗಣಿಸಿ ಈವರೆಗೂ ತಮ್ಮ ಸೇವೆಯನ್ನು ಕಾಯಂಗೊಳಿಸಿಲ್ಲ. ಆದ್ದರಿಂದ, ತಮ್ಮ ಸೇವೆ ಖಾಯಂಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ಕೈಗೆತ್ತುಕೊಂಡ ನ್ಯಾಯಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.