ಜಾತಿರಹಿತ ಧರ್ಮಕ್ಕೆ ಮತಾಂತರ: ಎಸ್ಸಿ, ಎಸ್ಟಿ ಕಾಯ್ದೆಯ ರಕ್ಷಣಾ ನಿಬಂಧನೆ ವಿಸ್ತರಣೆ ಸಾಧ್ಯವಿಲ್ಲ- ಹೈಕೋರ್ಟ್
ಲಖನೌ: ‘ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಿದ ಸಮುದಾಯಗಳನ್ನು ರಕ್ಷಿಸುವುದು ಎಸ್ಸಿ/ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆ ಉದ್ದೇಶವಾಗಿದ್ದು, ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ವ್ಯಕ್ತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣ ತಮ್ಮ ಎಸ್ ಸಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ಕಾಯ್ದೆಯಲ್ಲಿನ ರಕ್ಷಣಾತ್ಮಕ ನಿಬಂಧನೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಗೆ(ಎಸ್ಸಿ) ಸೇರಿದ ಜಿತೇಂದ್ರ ಕುಮಾರ್ ಸಾಹ್ನಿ ಮೇಲೆ ಹಿಂದೂ ದೇವರನ್ನು ಅವಹೇಳನ ಮಾಡಿದ ಕಾರಣ ನೀಡಿ ವಿವಿಧ ವಿಭಾಗಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. . ಇದನ್ನು ಪ್ರಶ್ನಿಸಿ ಜಿತೇಂದ್ರ ಕುಮಾರ್ ಸಾಹ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ಎಸ್.ಸಿ ಸಮುದಾಯಕ್ಕೆ ಸೇರಿದ್ದು, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ನೀಡುವಂತೆ ಜಿತೇಂದ್ರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಆದರೆ ಜಿತೇಂದ್ರ ಅವರ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಪ್ರವೀಣ್ ಕುಮಾರ್ ಗಿರಿ ನೇತೃತ್ವದ ಏಕದಸ್ಯ ಪೀಠವು, ಜಾತಿ ವ್ಯವಸ್ಥೆಗೆ ಮಾನ್ಯತೆ ಇಲ್ಲದ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳಿಗೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ರಕ್ಷಣಾ ನಿಬಂಧನೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ಆಧಾರಿತ ವ್ಯವಸ್ಥೆ ಇಲ್ಲ. ಆದ್ದರಿಂದ ಪರಿಶಿಷ್ಟ ಜಾತಿಯ ವರ್ಗೀಕರಣದ ಪ್ರಕಾರ ವ್ಯಕ್ತಿಯೊಬ್ಬರು ಆ ಧರ್ಮಕ್ಕೆ ಮತಾಂತರಗೊಂಡ ನಂತರ, ಹಿಂದಿದ್ದ ಜಾತಿ ಪ್ರಮಾಣಪತ್ರ ಮಾನ್ಯವಾಗುವುದಿಲ್ಲ ಎಂದು ತೀರ್ಪಿನಲ್ಲಿ ವಿವರಿಸಿದೆ.
ಅರ್ಜಿದಾರರ ಧರ್ಮದ ಕುರಿತು ಮೂರು ತಿಂಗಳೊಳಗೆ ತನಿಖೆ ನಡೆಸಿ. ಒಂದೊಮ್ಮೆ ಧರ್ಮದ ವಿಚಾರವಾಗಿ ನಕಲಿ ದಾಖಲೆ ಸೃಷ್ಟಿಸಿರುವುದು ಸಾಬೀತಾದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ಭವಿಷ್ಯದಲ್ಲಿ ಯಾರೂ ನ್ಯಾಯಾಲಯಕ್ಕೆ ಇಂಥ ಪ್ರಮಾಣಪತ್ರಗಳನ್ನು ಸಲ್ಲಿಸಬಾರದು ಎಂದು ನ್ಯಾಯಾಲಯವು ಇದೇ ವೇಳೆ ಮಹಾರಾಜ್ ಗಂಜ್ ನ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಕಾನೂನು-ಕಾಯ್ದೆ ಪ್ರಕಾರ ಏನೇನು ಅವಕಾಶಗಳಿವೆ ಎಂಬುದನ್ನು ಗಮನಿಸುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ, ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠವು ನಿರ್ದೇಶನ ನೀಡಿದೆ.
ಇಂತಹ ಸಂವಿಧಾನ ವಿರೋಧಿ ಚಟುವಟಿಕೆಗಳು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ, ನಾಲ್ಕು ತಿಂಗಳ ಒಳಗಾಗಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ, ಕೈಗೊಂಡ ಕ್ರಮಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
