ಎಕ್ಸಾಮ್ ನಲ್ಲಿ ನಕಲು: ಪರೀಕ್ಷೆಗೆ ನಿರ್ಬಂಧಿಸಿದ ಕಾನೂನು ವಿವಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಗೆ ಹಿನ್ನಡೆ.

ಬೆಂಗಳೂರು: ಕಾನೂನು ವಿಷಯಕ್ಕೆ ಸಂಬಂಧಿಸಿದ ‘ಮಾನವ ಹಕ್ಕುಗಳ ಕಾನೂನು ಮತ್ತು ಪ್ರಾಕ್ಟಿಸ್’ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಪರೀಕ್ಷೆ ನಿರ್ಬಂಧಿಸಿದ ಕಾನೂನು ವಿಶ್ವ ವಿದ್ಯಾನಿಲಯದ ಕ್ರಮವನ್ನ ಹೈಕೋರ್ಟ್ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಎಂ.ಐ ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿದ್ಯಾರ್ಥಿನಿ ಆರತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದೆ. ಪರೀಕ್ಷೆಯಲ್ಲಿ ನಕಲು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಗೆ ಪರೀಕ್ಷೆಯನ್ನು ಬರೆಯಲು ನಿರ್ಬಂಧ ಹೇರಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿವಿಯ ತೀರ್ಪನ್ನು ಸರಿ ಎಂದು ಏಕಸದಸ್ಯ ನ್ಯಾಯಪೀಠವೂ ಆಕೆಯ ಅರ್ಜಿಯನ್ನು ವಜಾ ಮಾಡಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ವಿಭಾಗೀಯ ನ್ಯಾಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ವಿದ್ಯಾರ್ಥಿನಿಗೆ ಅಲ್ಲಿಯೂ ಹಿನ್ನಡೆಯಾಗಿದೆ.
ಕಾನೂನು ವಿದ್ಯಾರ್ಥಿನಿ ಆರತಿ ತಾನು ನಕಲು ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹಾಲ್ ಟಿಕೆಟ್ ಮೇಲೆ ಉತ್ತರ ಬರೆದುಕೊಂಡು ಅದನ್ನು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಬಳಕೆ ಮಾಡಿರುವುದನ್ನು ಅಭ್ಯರ್ಥಿ ಒಪ್ಪಿಕೊಂಡಿರುವುದರಿಂದ ಉಳಿದ ಎಲ್ಲ ವಾದಗಳು ಅಪ್ರಸ್ತುತ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಿಸಿ ತೀರ್ಪು ನೀಡಿದೆ.
ವಿದ್ಯಾರ್ಥಿನಿ ಪರ ವಾದ ಮಂಡಿಸಿದ ವಕೀಲರು, ಆಕೆಯನ್ನು ನಕಲು ಮಾಡಿರುವುದನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಲಾಗಿದೆ. ಎಂಪಿಸಿಸಿ ವಾಸ್ತವಿಕ ಅಂಶಗಳನ್ನು ಪತ್ತೆ ಹಚ್ಚಿ ಶಿಫಾರಸು ಮಾಡುವ ಸಮಿತಿಯಾಗಿದ್ದು, ಸಮಿತಿಗೆ ಶಿಕ್ಷಿಸುವ ಅಧಿಕಾರವಿಲ್ಲ. ಹಾಗಾಗಿ, ಇಲ್ಲಿ ಕಾರ್ಯವಿಧಾನದಲ್ಲಿ ಲೋಪವಾಗಿದೆ. ಆಕೆ ಹಿಂದುಳಿದ ವರ್ಗದಿಂದ ಬಂದಿದ್ದು, ಆಕೆಯ ತಂದೆ ಕೂಲಿ ಕೆಲಸ ಮಾಡುತ್ತಾರೆ. ಆಕೆ ಇಡೀ ಕುಟುಂಬದಲ್ಲಿ ಮೊದಲ ತಲೆಮಾರಿನ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಕೀಲರು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ