1.2 ಲಕ್ಷ ರೂ. ಪರಿಹಾರ ನೀಡಲು ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಕೋರ್ಟ್ ಆದೇಶ
ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರಿಗೆ ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು12 ವರ್ಷ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1.20 ಲಕ್ಷ ದಂಡ ವಿಧಿಸಿದೆ. ಹಾಗೆಯೇ ದಂಡದ ಮೊತ್ತವನ್ನು ವಾರ್ಷಿಕ ಶೇ 24ರಷ್ಟು ಬಡ್ಡಿ ಸಮೇತ ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ದೂರದರ್ಶನಕ್ಕೆ ಸೇರ್ಪಡೆಯಾದ ದಿನದಿಂದ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ಆರೋಪದ ಮೇಲೆ ಮಹೇಶ್ ಜೋಶಿ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ಈ ತೀರ್ಪು ನೀಡಿದೆ.
ಮಹೇಶ್ ಜೋಶಿಯ ನಡೆ ಸರ್ವಥಾ ಒಪ್ಪುವಂತಿಲ್ಲ ಎಂದು ಕಟುಶಬ್ದಗಳಲ್ಲಿ ತೀರ್ಪು ನೀಡಿರುವ ಸಿಟಿ ಸಿವಿಲ್ ಕೋರ್ಟ್, ಪ್ರಕರಣದ ಫಿರ್ಯಾದಿ ಎನ್.ಕೆ. ಮೋಹನ್ ರಾಮ್ ಅವರಿಗೆ 1.2 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಬೇಕು ಹಾಗೂ ಫಿರ್ಯಾದಿದಾರರಲ್ಲಿ ಮಹೇಶ್ ಜೋಶಿ ಬೇಷರತ್ ಕ್ಷಮೆಯಾಚನೆ ಮಾಡಬೇಕು ಎಂದು ಆದೇಶ ನೀಡಿದೆ.
ಮಹೇಶ್ ಜೋಶಿ ಅವರು 1984ರಲ್ಲಿ ದೂರದರ್ಶನ ನಿರ್ದೇಶಕರಾಗಿದ್ದಾಗ ಮೋಹನ್ ರಾಂ ಸೇರಿ ಏಳು ಸಹೋದ್ಯೋಗಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣ ಸುಳ್ಳು ಎಂದು 2013ರಲ್ಲಿ ಹೈಕೋರ್ಟ್ ತೀರ್ಪು ನೀಡಿ, ಪ್ರಕರಣವನ್ನು ವಜಾಗೊಳಿಸಿತ್ತು.
ಹೈಕೋರ್ಟ್ ತೀರ್ಪಿನ ಬಳಿಕ ಮೋಹನ್ ರಾಂ ಅವರು, ತಮಗಾಗಿದ್ದ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟ ಸೇರಿ Rs 1.20 ಪರಿಹಾರ ಕೋರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ 14ನೇ ಸಿವಿಲ್ ನ್ಯಾಯಾಲಯವು 1.20 ಲಕ್ಷ ರೂ. ಪರಿಹಾರ ನೀಡುವಂತೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಆದೇಶಿಸಿದೆ.
ದಂಡವನ್ನು ಪರಿಹಾರವಾಗಿ ಪಾವತಿ ಮಾಡುವುದರ ಜತೆಗೆ ಸುಳ್ಳು ಪ್ರಕರಣದ ಸಂಬಂಧ ದೂರದರ್ಶನದಲ್ಲಿ ಹಾಗೂ ರಾಜ್ಯದ ಪ್ರಮುಖ ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಯಲ್ಲಿ ಕ್ಷಮೆ ಕೋರಬೇಕು. ತೀರ್ಪು ಬಂದ ಏಳು ದಿನಗಳಲ್ಲಿ ಇವನ್ನು ಮಾಡಬೇಕು’ ಎಂದು ನ್ಯಾಯಾಧೀಶರಾದ ಎ.ಎಂ.ನಳಿನಿ ಕುಮಾರಿ ಅವರು ಆದೇಶಿಸಿದ್ದಾರೆ.
ದೂರದರ್ಶನ ಹಾಗೂ ಎಲ್ಲ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಮೂಲಕ ಎನ್.ಕೆ. ಮೋಹನ್ ರಾಮ್ ಅವರಲ್ಲಿ ಕ್ಷಮೆ ಕೋರಬೇಕು ಎಂದು ಹೇಳಿರುವ ಕೋರ್ಟ್, ಫಿರ್ಯಾದಿದಾರರ ವಿರುದ್ಧ ನಕಲಿ ಪ್ರಕರಣ ದಾಖಲಿಸಿ ಮಹೇಶ್ ಜೋಷಿ ಅಪಾರ ವೇದನೆ ಮತ್ತು ನೋವನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದೆ.
ಜೋಶಿ ಅವರು ತಮ್ಮ ಸಹೋದ್ಯೋಗಿಗಳ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ವಿಚಕ್ಷಣಾ ವಿಭಾಗಕ್ಕೆ ಜೋಶಿ ಬರೆದಿರುವ ಪ್ರತಿಯೊಂದು ಶಬ್ದವೂ ಎನ್.ಕೆ.ಮೋಹನ್ ರಾಮ್ ವಿರುದ್ಧ ಪ್ರತೀಕಾರಕ್ಕೆ ಸಾಕ್ಷಿಯಾಗಿದೆ ಎಂದು ಕೋರ್ಟ್ ಹೇಳಿದೆ.
ಪರಿಹಾರ ಪಾವತಿಸಲು ಜೋಶಿಗೆ ಆದೇಶ ನೀಡಿದರಷ್ಟೇ ಸಾಲದು, ಈ ಮೂಕ ಸರ್ಕಾರಿ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸುವವರಿಗೆ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ ಎಂದು ನ್ಯಾ. ನಳಿನಿ ಕುಮಾರ್ ಅವರಿದ್ದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
