05/03/2026

Law Guide Kannada

Online Guide

ಉಚಿತ ಭಾಗ್ಯ’ ನೀಡುವ ಬದಲು ಉದ್ಯೋಗ ಸೃಷ್ಟಿಸಿ : ರಾಜ್ಯ ಸರ್ಕಾರಗಳ ಈ ಸಂಸ್ಕೃತಿಗೆ ಸುಪ್ರೀಂ ಕಳವಳ, ತೀವ್ರ ತರಾಟೆ

ನವದೆಹಲಿ : ರಾಜಕೀಯ ಪಕ್ಷಗಳು ಮತ ಸೆಳೆಯುವ ಉದ್ದೇಶದಿಂದ ಚುನಾವಣೆಗೂ ಮುನ್ನ ಘೋಷಿಸುವ ಉಚಿತ ಭಾಗ್ಯಗಳ ಸಂಸ್ಕೃತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ನೀತಿಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸುತ್ತವೆ ಎಂದು ಎಚ್ಚರಿಸಿದ್ದು, ಜನರಿಗೆ ಉಚಿತ ಭಾಗ್ಯಗಳನ್ನು ಹಂಚುವ ಬದಲು ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಿ ಎಂದು ರಾಜ್ಯ ಸರ್ಕಾರಗಳಿಗೆ ತಪರಾಕಿ ಹಾಕಿದೆ.

ಗ್ರಾಹಕರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ತಮಿಳುನಾಡು ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್‌ನ ಪ್ರಸ್ತಾವನೆಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ಈ ಗಂಭೀರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಚುನಾವಣೆಗೂ ಮುನ್ನ ನೀಡಲಾಗುವ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ತೀವ್ರವಾಗಿ ಖಂಡಿಸಿದೆ. ಇಂತಹ ನೀತಿಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಪಡಿಸುವುದರಿಂದ, ಇವುಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ತಿಳಿಸಿದೆ. ತಮಿಳುನಾಡು ಸರ್ಕಾರವು ಚುನಾವಣೆಗೂ ಮುನ್ನ ಉಚಿತಗಳನ್ನು ವಿತರಿಸುತ್ತಿರುವುದನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, “ನೀವು ಎಂತಹ ಸಂಸ್ಕೃತಿಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೀರಿ?” ಎಂದು ಕ್ಲಾಸ್ ತೆಗೆದುಕೊಂಡಿದೆ.

ಉಚಿತ ಘೋಷಣೆಗಳು ರಾಷ್ಟ್ರನಿರ್ಮಾಣಕ್ಕೆ ಮಾರಕ
ಜನರನ್ನು ಸಬಲೀಕರಣಗೊಳಿಸುವುದು ರಾಜ್ಯದ ಜವಾಬ್ದಾರಿಯಾದರೂ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಉಚಿತಗಳನ್ನು ನೀಡುವುದು ರಾಷ್ಟ್ರವನ್ನು ಕಟ್ಟುವ ದಾರಿಯಲ್ಲ. ದೇಶದ ಬಹುತೇಕ ರಾಜ್ಯಗಳು ಈಗಾಗಲೇ ಆದಾಯದ ಕೊರತೆಯನ್ನು ಎದುರಿಸುತ್ತಿವೆ. ಇಂತಹ ನೀತಿಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತೆ ಮಾಡುತ್ತವೆ ಎಂದು ನ್ಯಾಯಪೀಠವು ಕಟುವಾಗಿ ಟೀಕಿಸಿದೆ.

ಉಚಿತ ಘೋಷಣೆಗಳನ್ನು ಬಿಟ್ಟು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ
ರಾಜ್ಯಗಳು ಎಲ್ಲರಿಗೂ ಉಚಿತ ಆಹಾರ, ಸೈಕಲ್ ಅಥವಾ ವಿದ್ಯುತ್ ನೀಡುವ ಬದಲಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡಿ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಇಂತಹ ಉದಾರ ಉಚಿತ ಭಾಗ್ಯಗಳು ಅಡ್ಡಿಯಾಗುತ್ತವೆ. ಎಂದು ನ್ಯಾಯಪೀಠ ಹೇಳಿದೆ.

ಎಲ್ಲರಿಗೂ ವಿತರಿಸುವುದು ಓಲೈಕೆಯ ರಾಜಕಾರಣವಲ್ಲವೇ? ಸಿಜೆಐ ಚಾಟಿ
ಹಾಗೆಯೇ ಡಿಎಂಕೆ ಸರ್ಕಾರ ನೇತೃತ್ವದ ವಿದ್ಯುತ್ ವಿತರಣಾ ಸಂಸ್ಥೆಯ ನಡೆಯನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, “ಭಾರತದಲ್ಲಿ ನಾವು ಎಂತಹ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ? ವಿದ್ಯುತ್ ಬಿಲ್ ಪಾವತಿಸಲು ಅಶಕ್ತರಾದವರಿಗೆ ಕಲ್ಯಾಣ ಯೋಜನೆಯಡಿ ಸಹಾಯ ಮಾಡುವುದು ಅರ್ಥವಾಗುತ್ತದೆ. ಆದರೆ, ಶ್ರೀಮಂತರು ಮತ್ತು ಬಡವರ ನಡುವೆ ವ್ಯತ್ಯಾಸವನ್ನು ಗುರುತಿಸದೆ ಎಲ್ಲರಿಗೂ ವಿತರಿಸುವುದು ಓಲೈಕೆಯ ರಾಜಕಾರಣವಲ್ಲವೇ?”ಅಲ್ಲದೆ, “ರಾಜ್ಯಗಳು ಅಭಿವೃದ್ಧಿ ಯೋಜನೆಗಳಿಗೆ ಹಣ ವಿನಿಯೋಗಿಸುವ ಬದಲು ಕೇವಲ ಸಂಬಳ ಪಾವತಿಸುವುದು ಮತ್ತು ಇಂತಹ ಉಚಿತಗಳನ್ನು ಹಂಚುವ ಕೆಲಸವನ್ನಷ್ಟೇ ಮಾಡುತ್ತಿವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದರೆ ಕೆಲಸ ಮಾಡುವವರು ಯಾರು? ಇದರಿಂದ ಕೆಲಸದ ಸಂಸ್ಕೃತಿ ಏನಾಗುತ್ತದೆ?” ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.