07/03/2026

Law Guide Kannada

Online Guide

ಪೊಲೀಸರ ಕ್ರಮ ಟೀಕಿಸುವುದು, ಪ್ರತಿಭಟಿಸುವುದು ಕರ್ತವ್ಯಕ್ಕೆ ಅಡ್ಡಿ ಅಲ್ಲ: ಕೇಸ್ ರದ್ದುಗೊಳಿಸಿದ ಹೈ ಕೋರ್ಟ್

ಹಿಮಾಚಲ ಪ್ರದೇಶ : ಪೊಲೀಸರ ಕ್ರಮವನ್ನು ಟೀಕಿಸಿದರೆ, ಅದರ ವಿರುದ್ದ ಪ್ರತಿಭಟಿಸಿದರೆ ಅದು ಕರ್ತವ್ಯಕ್ಕೆ ಅಡ್ಡಿ ಆಗುವುದಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪೊಲೀಸ್ ವಿರುದ್ಧ ಫೇಸ್ ಬುಕ್ ಲೈವ್ ಕುರಿತ ಕೇಸ್ ರದ್ದುಪಡಿಸಿದ ಹಿಮಾಚಲ ಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ಸಂದೀಪ್ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಕರ್ತವ್ಯ ನಿರತ ಸಂಚಾರಿ ಪೊಲೀಸರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಹೇಳಿದಾಗ ಫೇಸ್ ಬುಕ್ ನೇರಪ್ರಸಾರ ಮಾಡಿದ ಅರ್ಜಿದಾರರಾದ ಚಾಲಕರು ಪೊಲೀಸರ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಶಿಮ್ಲಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.

ಸದರಿ ಪ್ರಕರಣವು ಚಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186ರ ಅಡಿಯಲ್ಲಿ ದಾಖಲಿಸಲಾಗಿತ್ತು. ಸಾರ್ವಜನಿಕ ಕಾರ್ಯವನ್ನು ನಿರ್ವಹಿಸಲು ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು ಅವರ ವಿರುದ್ಧದ ಆರೋಪವಾಗಿತ್ತು.

ಈ ಮಧ್ಯೆ ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಚಾಲಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ , ಅರ್ಜಿದಾರರು ಪೊಲೀಸರ ವಿರುದ್ಧ ಫೇಸ್ಬುಕ್ ಲೈವ್ ನಡೆಸಿ ಕೆಲ ಹೇಳಿಕೆ ನೀಡಿದ್ದಾರೆ ಎಂಬುದು ಅವರ ವಿರುದ್ಧದ ಆರೋಪ. ಇಂತಹ ಯಾವುದಾದರೂ ಘಟನೆ ನಡೆದಿದ್ದರೆ ಅದು ಪೊಲೀಸರ ಕರ್ತವ್ಯಕ್ಕೆ ಅರ್ಜಿದಾರರು ಅಡಚಣೆ ಉಂಟುಮಾಡಿದ್ದಾರೆ ಎಂದು ಹೇಳಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ವ್ಯಕ್ತಿಯ ನಡೆಯು ಸಾತ್ವಿಕವಾಗಿದ್ದರೆ ಅದು ಕರ್ತವ್ಯಕ್ಕೆ ಅಡ್ಡಿ ಎಂದು ಹೇಳಲಾಗದು. ಬದಲಿಗೆ ಬಲಪ್ರದರ್ಶನ, ಬೆದರಿಕೆ ಇಲ್ಲವೇ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಘಟನೆ ನೆದಿದ್ದರೆ ಮಾತ್ರ ಅದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186ರ ಅಡಿಯಲ್ಲಿ ಕರ್ತವ್ಯಕ್ಕೆ ಅಡಚಣೆ ಎಂದು ಹೇಳಬಹುದಾಗಿದೆ. ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ಮಾಡಿದರೆ ಅಥವಾ ಅವರ ಕಾರ್ಯವನ್ನು ಟೀಕಿಸಿದರೆ ಅದು ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಅಡ್ಡಿಪಡಿಸುವ ಕ್ರಿಮಿನಲ್ ಅಪರಾಧಕ್ಕೆ ಸಮಾನ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತಿಳಿಸಿದ.

ಆರೋಪಿಗಳು ದೈಹಿಕ ಬಲಪ್ರಯೋಗ ಮಾಡಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರೆ ಅಪರಾಧ ನಡೆದಿದೆ ಎಂದು ಅಂದಾಜಿಸಬಹುದು. ಆದರೆ, ಇಲ್ಲಿ ಅಂತಹ ಆರೋಪ ಇಲ್ಲ. ಫೇಸ್ಬುಕ್ ಲೈವ್ ಮಾಡಿ ಕೆಲ ಪದ ಬಳಕೆ ಮಾಡಿದ್ದಾರೆ ಎಂದ ಮಾತ್ರಕ್ಕೆ ಕರ್ತವ್ಯಕ್ಕೆ ಅಡ್ಡಿಯಲ್ಲ. ಕರ್ತವ್ಯಕ್ಕೆ ಅಡ್ಡಿ ಪಡಿಸುವಂತಹ ಯಾವುದೇ ಪದ ಬಳಕೆಯ ಆರೋಪ ಇಲ್ಲಿ ಕಂಡುಬರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಿಸಿ ಪ್ರಕರಣವನ್ನ ರದ್ದುಗೊಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.