ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪಾಟಿ ಸವಾಲು ಅಗತ್ಯ: ಪೋಕ್ಸೋ ಕೇಸ್ ನಲ್ಲಿ ಜೀವಾವಧಿ ಶಿಕ್ಷೆ ರದ್ದು
ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಯುವಕನೊಬ್ಬನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ ಮರುವಿಚಾರಣೆಗೆ ಅದೇಶಿಸಿರುವ ಕರ್ನಾಟಕ ಹೈಕೋರ್ಟ್, ಗಂಭೀರ ಪ್ರಕರಣಗಳಲ್ಲಿ ಸಾಕ್ಷಿಗಳ ಪಾಟಿ ಸವಾಲು ನಡೆಸಲು ಆರೋಪಿಗೆ ಸೂಕ್ತ ಅವಕಾಶ ನೀಡದಿದ್ದರೆ ನ್ಯಾಯಸಮ್ಮತ ವಿಚಾರಣೆಯ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಎಲೆಕ್ಟ್ರಾನಿಕ್ ಸಿಟಿಯ ವಿ.ಮಧು ಎಂಬಾತ ವಿಚಾರಣಾ ನ್ಯಾಯಾಲಯದ ಅದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್ ಮತ್ತು ಟಿ.ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠವು, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನುರದ್ದುಗೊಳಿಸಿ ಮರುವಿಚಾರಣೆಗೆ ಆದೇಶಸಿದೆ. ಅಲ್ಲದೆ ಪ್ರಕರಣದ ವಿಚಾರಣ ಹಂತದಲ್ಲಿ ನಡೆದಿರುವ ಕಾರ್ಯವಿಧಾನದ ಲೋಪಗಳನ್ನು ಎತ್ತಿ ತೋರಿಸಿದೆ.
ಪ್ರಕರಣದ 11 ಸಾಕ್ಷಿಗಳ ಪೈಕಿ ಸಂತ್ರಸ್ತೆ, ಆಕೆಯ ಪಾಲಕರು, ವೈದ್ಯಾಧಿಕಾರಿ, ತನಿಖಾಧಿಕಾರಿ ಸೇರಿ ಒಟ್ಟು & ಪ್ರಮುಖ ಸಾಕ್ಷಿಗಳನ್ನು ಆರೋಪಿ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್ ಮಾಡಿಯೇ ಇಲ್ಲ ಎಂಬ ಅಂಶವನ್ನು ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಗೆ ಹಿಂದಿರುಗಿಸಿತು. ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಗೆ ಆರೋಪಿ ಪರ ವಕೀಲರಿಗೆ ಸೂಕ್ತ ಅವಕಾಶ ನೀಡಬೇಕು. ಅಲ್ಲದೆ, ಸಂತ್ರಸ್ತೆ ವಯಸ್ಸಿನ ದಾಖಲೆಗಳ ಬಗ್ಗೆ ಆಕ್ಷೇಪಣೆಗಳಿದ್ದು, ಶಾಲಾ ಪ್ರಮಾಣಪತ್ರದ ವಿಶ್ವಾಸಾರ್ಹತೆ ಪರಿಶೀಲಿಸಬೇಕು. ಪ್ರಕರಣದ ವಿಚಾರಣೆಯನ್ನು ಏ.30ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಈ ಮಧ್ಯೆ ಪ್ರಕರಣದ ಆರೋಪಿಯು ಈ ಹಿಂದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ವಿಚಾರಣಾ ನ್ಯಾಯಾ ಲಯದಲ್ಲಿ ಮರುವಿಚಾರಣೆ ಮುಗಿಯುವ ತನಕ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಆರೋಪಿ ಮಧು ವಿರುದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೋಕೋ ಕಾಯ್ದೆ ಅಡಿಯಲ್ಲಿ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2022ರ ಏಪ್ರಿಲ್ನಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಮಧು ಹೈಕೋರ್ಟ್ಗೆ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
