ಅತ್ತೆ ಮನೆಯ ಆಸ್ತಿ ಲಪಟಾಯಿಸಲು ಸೊಸೆ ಸಂಚು : ಹೈಕೋರ್ಟ್ ಕೊಟ್ಟ ತೀರ್ಪೀದು?
ಬೆಂಗಳೂರು: ಅತ್ತೆಯ ಮನೆಗೆ ಬಂದು ಠಿಕಾಣಿ ಹೂಡಿ ನನಗೂ ಪಾಲು ನೀಡಿ ಎಂದು ಪಟ್ಟು ಹಿಡಿದು ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಸೊಸೆಗೆ ಮನೆ ಖಾಲಿ ಮಾಡುವಂತೆ ನಿರ್ದೇಶನ ನೀಡಿದ್ದ ಬಳ್ಳಾರಿ ಉಪವಿಭಾಗಾಧಿಕಾರಿ (ಎಸಿ) ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
‘ಬಳ್ಳಾರಿ ಉಪವಿಭಾಗಾಧಿಕಾರಿ 2025ರ ಜೂನ್ 17ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಸೊಸೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ)ವು, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007ರ ಅನುಸಾರ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಹಿರಿಯರನ್ನು ಮನೆಯಿಂದ ಹೊರಹಾಕುವ ಆದೇಶವನ್ನು ಸಮರ್ಥನೀಯ ಎಂದು ನಿರ್ಣಯಿಸಬಹುದು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪ್ರಕರಣ ಹಿನ್ನೆಲೆ
ಸುಮಾರು ಎಂಟು ವರ್ಷಗಳ ಹಿಂದೆ ಪೋಷಕರ ಮಗ ಮೃತಪಟ್ಟಿದ್ದು, ನಂತರ ಸೊಸೆ ಮತ್ತು ಅತ್ತೆಯ (65) ನಡುವಿನ ಸಂಬಂಧ ಹಳಸಿತ್ತು. ಹೀಗಾಗಿ ಸೊಸೆ ಸರ್ಕಾರಿ ಕೆಲಸ ಸಿಗಲಿದೆ ಎಂಬ ಕಾರಣಕ್ಕೆ ಆಂಧ್ರಪ್ರದೇಶಕ್ಕೆ ಶಿಫ್ಟ್ ಆಗಿದ್ದರು.
ಈ ಮಧ್ಯೆ, ಬಳ್ಳಾರಿಯ ಸಿದ್ಧಾರ್ಥ ನಗರದಲ್ಲಿ ಸ್ವಯಾರ್ಜಿತವಾಗಿ ನಿರ್ಮಿಸಿಕೊಂಡಿದ್ದ ಮನೆಯಲ್ಲಿ ಅತ್ತೆ ವಾಸವಿದ್ದರು. ಹಣಕಾಸಿನ ತೊಂದರೆಯಿಂದ ಮನೆಯನ್ನು ಮಾರಾಟ ಮಾಡಲು ಉದ್ದೇಶಿಸಿ, ಮುಂಗಡ ಹಣ ಪಡೆದಿದ್ದರು.
ಈ ವಿಚಾರ ತಿಳಿದ ಕೂಡಲೇ ಆಂಧ್ರದಲ್ಲಿದ್ದ ಸೊಸೆ ಅತ್ತೆ ಮನೆಗೆ ಬಂದು, ‘ನನಗೂ ಆಸ್ತಿಯಲ್ಲಿ ಪಾಲು ನೀಡಬೇಕು ಇಲ್ಲವೇ 60 ಲಕ್ಷ ರೂ. ನೀಡಬೇಕು’ ಎಂದು ಡಿಮ್ಯಾಂಡ್ ಮಾಡಿ ಮನೆಯಲ್ಲಿದ್ದ ಅತ್ತೆಗೆ ಸಂಬಂಧಿಸಿದ ವಸ್ತುಗಳನ್ನು ಹೊರಹಾಕಿ, ಮನೆಯಲ್ಲಿ ಠಿಕಾಣಿ ಹೂಡಿದ್ದರು.
ಸೊಸೆಯ ಈ ಕೃತ್ಯದಿಂದ ಬಾಧಿತರಾದ ಅತ್ತೆಯು ಪೋಷಕರ ಸಕ್ಷಮ ಪ್ರಾಧಿಕಾರವಾದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಯ ಅಧ್ಯಕ್ಷರೂ ಆದ ಬಳ್ಳಾರಿ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ ನಮ್ಮ ಆಸ್ತಿ ರಕ್ಷಣೆ, ಮಾನಸಿಕ ಶಾಂತಿ ಮತ್ತು ಪ್ರಾಣ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸಕ್ಷಮ ಪ್ರಾಧಿಕಾರ, ‘ಸೊಸೆ ಮನೆಯನ್ನು ಖಾಲಿ ಮಾಡಬೇಕು. ಸದರಿ ಆಸ್ತಿಯನ್ನು ಮನವಿದಾರರ ಹೆಸರಿಗೆ ನೋಂದಾಯಿಸಬೇಕು’ ಎಂದು ಬಳ್ಳಾರಿ ಉಪನೋಂದಣಾಧಿಕಾರಿಗೆ ಆದೇಶಿಸಿದ್ದರು.
ನಂತರ ಸೊಸೆ ಈ ಆದೇಶವನ್ನು ಪ್ರಶ್ನಿಸಿ ಬಳ್ಳಾರಿ ಉಪವಿಭಾಗಾಧಿಕಾರಿ ಆದೇಶವನ್ನ ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ನ್ಯಾಯಪೀಠ ಸೊಸೆಯ ಅರ್ಜಿಯನ್ನ ವಜಾಗೊಳಿಸಿ ಉಪವಿಭಾಗಾಧಿಕಾರಿ ಆದೇಶವನ್ನ ಎತ್ತಿ ಹಿಡಿದಿದೆ. ‘ಹಿರಿಯ ನಾಗರಿಕರು ಎನಿಸಿರುವ ಅತ್ತೆಯನ್ನು ಸೊಸೆ ಔಟ್ ಔಸ್ ನಲ್ಲಿ (ಹೊರಮನೆ) ಇರಿಸಿದ್ದಾರೆ. ಇದರಿಂದ ಅತ್ತೆ ತಮ್ಮ ಸ್ವಂತ ಮನೆಗೆ ಗೌರವಯುತ ಪ್ರವೇಶ ಹೊಂದುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಮನೆಯು ಸೊಸೆಯ ವಶದಲ್ಲಿದ್ದು, ಅವರು ಆ ಆವರಣದಲ್ಲಿ ವಾಸಿಸುತ್ತಿಲ್ಲ. ಪತಿಯ ಮರಣದ ನಂತರ ಸೊಸೆ ಆಂಧ್ರಪ್ರದೇಶಕ್ಕೆ ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆ. ಅತ್ತೆಯೊಂದಿಗೆ ಸೊಸೆಯ ಸಂಬಂಧ ಹಳಸಿದೆ. ಈ ಆಧಾರದಡಿ ಮನೆಯ ಆವರಣವನ್ನು ಸೊಸೆಗೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
