06/03/2026

Law Guide Kannada

Online Guide

ಪುತ್ರಿಯರ ಆಸ್ತಿ ಮೋಹ, ತಂದೆಯ ಆರೈಕೆಯಲ್ಲಿ ನಿರ್ಲಕ್ಷ್ಯ: ಗಿಫ್ಟ್ ಡೀಡ್ ರದ್ದುಗೊಳಿಸಿ ವಯೋವೃದ್ದನ ನೆರವಿಗೆ ನಿಂತ ಹೈಕೋರ್ಟ್

ಬೆಂಗಳೂರು: ಇಳಿವಯಸ್ಸಿನಲ್ಲಿ ತಂದೆಯನ್ನ ಚೆನ್ನಾಗಿ ನೋಡಿಕೊಳ್ಳದೇ ಕೇವಲ ಆಸ್ತಿಯ ಮೋಹಕ್ಕೆ ಬಿದ್ದಿದ್ದ ಪುತ್ರಿಯರಿಗೆ ಹೈಕೋರ್ಟ್ ಶಾಕ್ ನೀಡಿದೆ. ತನ್ನ ಪುತ್ರಿಯರಿಗೆ ಆಸ್ತಿ ವರ್ಗಾವಣೆ ಮಾಡಿದ್ದ ಗಿಫ್ಟ್ ಡೀಡ್ ರದ್ದುಕೋರಿ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಾನ್ಯಮಾಡುವ ಮೂಲಕ ವಯೋವೃದ್ದನ ನೆರವಿಗೆ ಧಾವಿಸಿದೆ.

ತುಮಕೂರಿನ ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ 84 ವರ್ಷದ ವೆಂಕಟಯ್ಯ ಅವರು ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದರು. ನಂತರ ಪುತ್ರಿಯರ ‘ನಿಜ ಬಣ್ಣ’ ಬಯಲಾಗಿ ತನ್ನನ್ನು ನಿರಾಶ್ರಿತನನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿರುವ ಹೈಕೋರ್ಟ್ ವೃದ್ಧನಿಗೆ ನ್ಯಾಯ ಒದಗಿಸಿದೆ.

ವೆಂಕಟಯ್ಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ, 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆ ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದೆ. ಅಲ್ಲದೆ, ‘ಹಿರಿಯ ನಾಗರಿಕರಿಗೆ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ ಅವರ ಜೀವನ ನಿರ್ವಹಣೆಗೆ ನೆರವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಆಸ್ತಿ ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ,” ಎಂದು ಹೇಳಿದೆ.

ಏನಿದು ಪ್ರಕರಣ..
ವೆಂಕಟಯ್ಯ ಸುಮಾರು 2.4 ಎಕರೆ ಕೃಷಿ ಭೂಮಿ ಹೊಂದಿದ್ದರು. ವೃದ್ಧಾಪ್ಯದಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತಾರೆಂಬ ಭರವಸೆಯಿಂದ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಬಳಿಕ ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿ ಹಿರಿಯ ನಾಗರಿಕರ ಕಾಯಿದೆಯಡಿ ತಮ್ಮ ಗಿಫ್ಟ್ ಡೀಡ್ ರದ್ದು ಕೋರಿ ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು.

ನ್ಯಾಯಮಂಡಳಿಯು 2023ರ ಡಿಸೆಂಬರ್ 19 ರಂದು ಅವರ ದೂರನ್ನು ವಜಾಗೊಳಿಸಿತು. ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧ ಹೊಂದಿರುವ ಸ್ಪಷ್ಟ ಷರತ್ತು ಇಲ್ಲಎಂದು ತೀರ್ಪು ನೀಡಿತ್ತು. 2024ರ ಅ.22ರಂದು ಜಿಲ್ಲಾಧಿಕಾರಿ ಕೂಡ ಅದೇ ಆದೇಶವನ್ನು ಎತ್ತಿ ಹಿಡಿದಿದ್ದರು. ಹಾಗಾಗಿ, ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ ಗೆ ಮೊರೆ ಹೋಗಿದ್ದ ವೆಂಕಟಯ್ಯ, ”ನಾನು ಅನಕ್ಷರಸ್ಥ ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದೆ. ಅಲ್ಲದೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆ,” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ವೆಂಕಟಯ್ಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ‘ಕಾನೂನುಬದ್ಧವಾಗಿ ದೋಷಪೂರಿತ’ ಮತ್ತು ಕಾಯಿದೆಯ ತಪ್ಪು ತಿಳಿವಳಿಕೆ ಆಧರಿಸಿವೆ. ‘ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ,” ಎಂದು ಅಭಿಪ್ರಾಯಪಟ್ಟಿದೆ.

ಹಿರಿಯ ನಾಗರಿಕರ, ವಿಶೇಷವಾಗಿ ಗ್ರಾಮೀಣ ಕರ್ನಾಟಕದವರ ವಿಶ್ವಾಸಾರ್ಹ ಸ್ವಭಾವ ಮತ್ತು ಮಕ್ಕಳ ಮೇಲೆ ಅವರ ಭಾವನಾತ್ಮಕ ಮತ್ತು ಆರ್ಥಿಕ ಅವಲಂಬನೆಯು ಕಾನೂನಿನಿಂದ ಸ್ಪಷ್ಟವಾಗಿ ಗುರುತಿಸಲ್ಪಟ್ಟ ಸಾಮಾಜಿಕ ವಾಸ್ತವವಾಗಿದೆ. ವೆಂಕಟಯ್ಯನವರ ವೃದ್ಧಾಪ್ಯ, ಗ್ರಾಮೀಣ ಹಿನ್ನೆಲೆ, ನಿಕಟ ಕುಟುಂಬ ಸಂಬಂಧ ಮತ್ತು ಆಸ್ತಿ ವರ್ಗಾವಣೆಯ ನಂತರದ ನಿರ್ಲಕ್ಷ್ಯ ಗಮನಿಸಿದ ನ್ಯಾಯಾಲಯವು, ಗಿಫ್ಟ್ ಡೀಡ್ ಆರೈಕೆ ಮತ್ತು ನಿರ್ವಹಣೆಯ ನಿರೀಕ್ಷೆಗೆ ಸ್ಪಷ್ಟವಾಗಿ ಸಂಬಂಧಿಸಿದೆ ಎಂದು ಅಭಿಪ್ರಾಯಪಟ್ಟು ಗಿಫ್ಟ್ ಡೀಡ್ ರದ್ದುಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.