ಮರಣ ನೋಂದಣಿ : ಇನ್ಮುಂದೆ ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಮರಣ ಪ್ರಮಾಣಪತ್ರ ವಿತರಣೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದ್ದು, ಮರಣ ನೋಂದಣಿ ಮಾಡಲು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.
ಇನ್ನು ಮುಂದೆ ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ ಪ್ರತಿ ಸಾವಿಗೂ ನಿಖರ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ, ಮರಣ ಕಾರಣದ ವೈದ್ಯಕೀಯ ಪ್ರಮಾಣೀಕರಣ (ಎಂಸಿಸಿಡಿ) ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಕ್ಸ್ ಪೋಸ್ಟ್ ನಲ್ಲಿ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣಪತ್ರ (MCCD) ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮತ್ತು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಕುರಿತು ಆರೋಗ್ಯ ಇಲಾಖೆ ಮೂಲಕ ಹೊರಡಿಸಿದ ಸುತ್ತೋಲೆ ಇದಾಗಿದೆ ಎಂದು ತಿಳಿಸಿದ್ದಾರೆ.
ಇದು ವ್ಯಕ್ತಿಯ ಮರಣದ ಅಧಿಕೃತ ಕಾನೂನು ದಾಖಲೆಯಾಗಿದ್ದು, ಕುಟುಂಬದ ಆಸ್ತಿ, ವಿಮೆ, ಪಿಂಚಣಿ ಮತ್ತು ಇತರ ಕಾನೂನು ಪ್ರಕ್ರಿಯೆಗಳಿಗೆ ಅತ್ಯಗತ್ಯವಾಗಿದೆ, ಇದನ್ನು ಜನನ ಮತ್ತು ಮರಣ ನೋಂದಣಿ ಕಾಯಿದೆ (RBD Act) ಪ್ರಕಾರ ಸರ್ಕಾರದಿಂದ ವಿತರಿಸಲಾಗುತ್ತದೆ. ನೋಂದಣಿ ಕಡ್ಡಾಯ ಮತ್ತು ಇದನ್ನು ನಿಗದಿತ ಸಮಯದೊಳಗೆ (ಸಾಮಾನ್ಯವಾಗಿ 21 ದಿನಗಳು) ಮಾಡಬೇಕಾಗುತ್ತದೆ, ಇಲ್ಲದಿದ್ದರೆ ದಂಡದೊಂದಿಗೆ ತಡವಾಗಿ ನೋಂದಣಿ ಮಾಡಬೇಕಾಗುತ್ತದೆ.
ರಾಜ್ಯದಲ್ಲಿ ನೋಂದಾಯಿತವಾಗುವ ಸಾವುಗಳಲ್ಲಿ ಶೇ 26.7ರಷ್ಟು ಸಾವುಗಳಿಗೆ ಮಾತ್ರ ವೈದ್ಯಕೀಯವಾಗಿ ಪ್ರಮಾಣಪತ್ರ ಲಭ್ಯ ಇವೆ. ಈ ಹಿನ್ನಲೆಯಲ್ಲಿ ಪ್ರತಿ ಸಾವಿನ ನಿಖರ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ವೈದ್ಯಕೀಯ ಸಂಸ್ಥೆಗಳಲ್ಲಿನ ಸಾವುಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ವ್ಯಕ್ತಿ ಮರಣ ಹೊಂದಿದರೂ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯು ಆದೇಶಿಸಿದ್ದಾರೆ.
ಮರಣ ಹೊಂದಿದ ವ್ಯಕ್ತಿಯನ್ನು ವೈದ್ಯರು ಪರೀಕ್ಷಿಸಿ, ನಮೂನೆ ‘4 ಎ’ ನಲ್ಲಿ ಮರಣಕ್ಕೆ ಕಾರಣವೇನು ಎಂಬ ಕುರಿತಾದ ಪ್ರಮಾಣಪತ್ರವನ್ನು ಸಂಬಂಧಪಟ್ಟವರಿಗೆ ಉಚಿತವಾಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಸಾವು ಸಂಭವಿಸಿದ 21 ದಿನದಲ್ಲಿ ಸಂಬಂಧಪಟ್ಟವರು ಮರಣ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಎಂಸಿಸಿಡಿ ನಮೂನೆಗಳನ್ನು ನೀಡಲು ನಿರ್ಲಕ್ಷಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿದ್ದಲ್ಲಿ ನಮೂನೆ-4ರಲ್ಲಿ ವೈದ್ಯಕೀಯ ಮರಣ ಕಾರಣದ ಕುರಿತಾದ ಪ್ರಮಾಣ ಪತ್ರವನ್ನು ‘ಇ-ಜನ್ಮ’ ಅನ್ ಲೈನ್ನಲ್ಲಿ ಸಲ್ಲಿಸಬೇಕಾಗುತ್ತದೆ. ನಿರ್ದಿಷ್ಟ ತಿಂಗಳಲ್ಲಿ ಯಾವುದೇ ಸಾವುಗಳು ಸಂಭವಿಸದ ಸಂದರ್ಭಗಳಲ್ಲಿ ‘ಶೂನ್ಯ’ ವರದಿಯನ್ನು ಸಲ್ಲಿಸಬೇಕು. ಪ್ರತಿ ತಿಂಗಳ 10ರೊಳಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ವ್ಯವಸ್ಥೆಯ ಅನುಷ್ಠಾನಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪರಿಶೀಲನಾ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯು ಮೇಲ್ವಿಚಾರಣೆ, ಅನುಸರಣೆಯನ್ನು ಖಚಿತಪಡಿಸಿ ಕೊಳ್ಳಲು ಮತ್ತು ಸಲ್ಲಿಸಿದ ನಮೂನೆಗಳ ಮಾದರಿಯನ್ನು ಪರಿಶೀಲಿಸಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
