06/03/2026

Law Guide Kannada

Online Guide

ಗರಿಷ್ಟ ವಯೋಮಿತಿ ಮೀರಿದ್ದರೂ ಅನುಕಂಪ ಆಧಾರದ ನೇಮಕಾತಿಗೆ ಮೃತರ ಪತ್ನಿ ಅರ್ಹರು – ಹೈಕೋರ್ಟ್

ಬೆಂಗಳೂರು: ಗರಿಷ್ಟ ವಯೋಮಿತಿ ಮೀರಿದ್ದರೂ ಸಹ ಅನುಕಂಪದ ಆಧಾರದ ನೇಮಕಾತಿಯಡಿ ಮೃತರ ಪತ್ನಿ ನೌಕರಿಗೆ ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಸರೋಜಾ ವಿರುದ್ಧ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತಿತರರು ಈ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದೆ. ನೇಮಕಾತಿಗೆ ನಿಗದಿಪಡಿಸಿದ ವಯಸ್ಸಿನ ಮಿತಿಯನ್ನು ಮೀರಿದ್ದರೂ ಸಹಾನುಭೂತಿಯ ಆಧಾರದ ಮೇಲೆ ನಡೆಯುವ ನೇಮಕಾತಿಯಲ್ಲಿ ಪತ್ನಿಯು ಮೃತ ಗಂಡನ ಕೆಲಸವನ್ನು ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ..
ಗಣೇಶ ರಾವ್ ಎನ್. ಕೊಂಡಾಯಿ ಎಂಬವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಯಲ್ಲಿ 4.4.2006 ರಿಂದ ಸೇವೆ ಸಲ್ಲಿಸುತ್ತಿದ್ದರು. ದಿನಾಂಕ 23.9.2023 ರಂದು ಅವರು ಸೇವೆಯಲ್ಲಿದ್ದ ಅವಧಿಯಲ್ಲಿ ಮೃತಪಟ್ಟಿದ್ದರು.

ಬಳಿಕ ಅನುಕಂಪದ ಆಧಾರದ ಮೇಲೆ ತನ್ನ ಪತಿಯು ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆಯಲ್ಲಿ ತನಗೆ ಉದ್ಯೋಗ ನೀಡಬೇಕೆಂದು ಕೋರಿ ದಿನಾಂಕ 20.5.2024 ರಂದು ರಂದು ಮೃತ ಗಣೇಶ್ ರಾವ್ ಎನ್ ಕೊಂಡಾಯಿ ಅವರ ಪತ್ನಿ ಸರೋಜಾ ಅರ್ಜಿ ಸಲ್ಲಿಸಿದರು.

ಅವರ ಅರ್ಜಿಯನ್ನು ಪರಿಶೀಲಿಸಿದ ಸಂಸ್ಥೆಯು ಅರ್ಜಿದಾರರು ಪ್ರವರ್ಗ 3 ಬಿ ಗೆ ಸೇರಿದ್ದು ನೇಮಕಾತಿ ನಿಯಮಾವಳಿಗಳ ಪ್ರಕಾರ ಸದರಿ ಪ್ರವರ್ಗದಡಿ ಗರಿಷ್ಠ ವಯೋಮಿತಿ 38 ಆಗಿದ್ದು ಮೃತಾವಲಂಬಿ ವಿಧವೆಯರಿಗೆ 5 ವರ್ಷಗಳ ವಯೋಮಿತಿಯನ್ನು ಸಡಿಲಿಸಲಾಗಿದ್ದು ಹೆಚ್ಚುವರಿಯಾಗಿ 5 ವರ್ಷಗಳನ್ನು ಸೇರಿಸಿದ್ದಲ್ಲಿ ಗರಿಷ್ಠ ವಯೋಮಿತಿ 43 ಆಗಿರುತ್ತದೆ.

ಆದರೆ ಅರ್ಜಿದಾರಳಾದ ಸರೋಜಾ ಅವರ ವಯಸ್ಸು 47 ಆಗಿರುವುದರಿಂದ ಅನುಕಂಪದ ನೆಲೆಯ ನೇಮಕಾತಿ ನಿಯಮಾವಳಿಗಳ ಅಡಿ ನೇಮಕಾತಿಗೆ ಅವಕಾಶವಿರುವುದಿಲ್ಲ ಎಂದು ದಿನಾಂಕ 17-1-2025ರ ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ನೀಡಿದ ಸದರಿ ಹಿಂಬರಹವನ್ನು ಪ್ರಶ್ನಿಸಿ ಸರೋಜಾ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 106296/2025 ಅನ್ನು ದಾಖಲಿಸಿದ್ದರು.

ರಿಟ್ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸರೋಜಾ ಅವರಿಗೆ 47 ವರ್ಷ ವಯಸ್ಸು ಹಾಗೂ ಆಕೆಯ ಮಗನಿಗೆ 13 ವರ್ಷ ವಯಸ್ಸು ಆಗಿರುವುದರಿಂದ ಇಬ್ಬರಿಗೂ ನಿಯಮಾನುಸಾರ ನೇಮಕಾತಿಗೆ ಅವಕಾಶವಿಲ್ಲ. ಇದರಿಂದಾಗಿ ಅನುಕಂಪದ ನೆಲೆಯ ನೇಮಕಾತಿಯ ಉದ್ದೇಶವೇ ವಿಫಲವಾಗುತ್ತದೆ. ಆದುದರಿಂದ ಮೃತ ನೌಕರನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ವಯೋಮಿತಿಯಲ್ಲಿ ಸಡಿಲಿಕೆ ನೀಡಿ ಅರ್ಜಿದಾರರಾದ ಸರೋಜಾ ಅವರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ನೀಡಬೇಕೆಂದು ಮನವಿ ಮಾಡಿದರು.

ಬಳಿಕ ಪ್ರತಿವಾದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಪರವಾಗಿ ವಾದ ಮಂಡಿಸಿದ ವಕೀಲರು, ಸಂಸ್ಥೆಯ ನೇಮಕಾತಿ ನಿಯಮಾವಳಿಗಳಡಿ ಅರ್ಜಿದಾರರು ಗರಿಷ್ಠ ವಯೋಮಿತಿ ಮೀರಿರುವುದರಿಂದ ಅವರನ್ನು ಅನುಕಂಪದ ನೆಲೆಯಲ್ಲಿ ನೇಮಕಾತಿ ಮಾಡಲು ಅವಕಾಶವಿಲ್ಲ. ಮೃತನ ಕುಟುಂಬದ ಇತರ ಅರ್ಹ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಬಹುದು ಎಂದು ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ. ಆದುದರಿಂದ ರಿಟ್ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಎರಡು ಕಡೆ ವಾದ ಆಲಿಸಿದ ನ್ಯಾಯಪೀಠವು ನೇಮಕಾತಿಗೆ ನಿಗದಿಪಡಿಸಿದ ವಯಸ್ಸಿನ ಮಿತಿ ಮೀರಿದ್ದರೂ ಸಹಾನುಭೂತಿಯ ಆಧಾರದ ಮೇಲೆ ನಡೆಯುವ ನೇಮಕಾತಿಯಲ್ಲಿ ಪತ್ನಿಯು ಮೃತ ಗಂಡನ ಕೆಲಸವನ್ನು ಪಡೆಯಬಹುದು. ನೌಕರಿಗೆ ಅರ್ಹರಾಗಿರುತ್ತಾರೆ ಎಂದು ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.