06/03/2026

Law Guide Kannada

Online Guide

ಅಪಘಾತ ಮಾಹಿತಿ ನೀಡುವಲ್ಲಿ ವಿಳಂಬ, ನಿರ್ಲಕ್ಷ್ಯ: ಹಕ್ಕುದಾರನ ಕ್ಲೈಮ್ ಮೇಲೆ ಪರಿಣಾಮ ಬೀರಲ್ಲ- ಹೈಕೋರ್ಟ್

ಬೆಂಗಳೂರು: ರಸ್ತೆ ಅಪಘಾತದ ಮಾಹಿತಿ ನೀಡುವಲ್ಲಿ ಆಸ್ಪತ್ರೆ ವಿಳಂಬ ತೋರಿದರೆ, ಅಪಘಾತದ ಬಗ್ಗೆ ಮಾಹಿತಿ ರವಾನಿಸಲು ನಿರ್ಲಕ್ಷ್ಯ ತೋರಿದರೂ ಹಕ್ಕುದಾರನ ಕ್ಲೈಮ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಪಾಂಡುರಂಗ ವಿರುದ್ಧ ದುರ್ದುಂಡಿ ಮಾಲಗೌಡ ಪಾಟೀಲ್” ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಮೋಟಾರು ವಾಹನ ಅಪಘಾತ ಕ್ಷೇಮು ಪ್ರಕರಣಗಳಲ್ಲಿ ರಸ್ತೆ ಅಪಘಾತದ ಮಾಹಿತಿ ನೀಡುವಲ್ಲಿ ಆಸ್ಪತ್ರೆ ವಿಳಂಬ ಮಾಡಿರುವುದು ಹಕ್ಕುದಾರನ ಕ್ಷೇಮು ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದೆ. ಎರಡೂ ಮೇಲ್ಮನವಿಗಳನ್ನು ಪುರಸ್ಕರಿಸಿದ್ದು, ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಮತ್ತೆ ಇತ್ಯರ್ಥಪಡಿಸಬೇಕು ಎಂದು ಟ್ರಿಬ್ಯೂನಲ್ ಗೆ ನಿರ್ದೇಶನ ನೀಡಿತು.

ಏನಿದು ಪ್ರಕರಣ…
ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಯಲ್ಲಿ ಕ್ಲೈಮ್ ಮಂಡಿಸಿದ ಅರ್ಜಿಯನ್ನು ಬೆಳಗಾವಿಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ವಜಾಗೊಳಿಸಿತ್ತು. ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಈ ಬಗ್ಗೆ ಆಸ್ಪತ್ರೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಗಾಯಾಳು ಅಪಘಾತದ ಬಗ್ಗೆ ತಕ್ಷಣ ದೂರು ನೀಡುವಲ್ಲಿ ನಿರ್ಲಕ್ಷ ತೋರಿದ್ದಾರೆ. ಈ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಅಪಘಾತ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ವಿಳಂಬವಾಗಿ ದೂರು ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಕ್ಲೈಮುದಾರನ ಅರ್ಜಿಯನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ರವಾನಿಸಲು ನಿರ್ಲಕ್ಷ್ಯ ತೋರಿದರು ಎಂಬ ಕಾರಣಕ್ಕೆ ಕ್ಲೈಮುದಾರ ಅರ್ಜಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಪೊಲೀಸರಿಗೆ ದೂರು ನೀಡುವ ಯಾವುದೇ ಕಾನೂನು ಸಮಯ ನಿಗದಿಪಡಿಸಿಲ್ಲ. ಆದರೆ, ಆ ವಿಳಂಬ ಎಷ್ಟು ಸಮಂಜಸ ಅಥವಾ ಅಪಾಯಕಾರಿ ಎಂಬುದನ್ನು ಆಯಾ ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶವನ್ನು ಅವಲಂಬಿಸಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.