20/05/2025

Law Guide Kannada

Online Guide

ಉದ್ದೇಶಪೂರ್ವಕವಾಗಿ ಹೆಣ್ಣಿನ ಸೌಂದರ್ಯ ಬಣ್ಣಿಸುವುದು ಕೂಡ ಲೈಂಗಿಕ ಕಿರುಕುಳಕ್ಕೆ ಸಮ- ಹೈಕೋರ್ಟ್

ಕೇರಳ: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಕೇರಳ ಹೈಕೋರ್ಟ್, ಉದ್ದೇಶಪೂರ್ವಕವಾಗಿ, ಅನುಚಿತವಾಗಿ ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಕೂಡ ಲೈಂಗಿಕ ಕಿರುಕುಳಕ್ಕೆ ಸಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು, ತನ್ನ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ರದ್ದುಪಡಿಸುವಂತೆ ಅವರು ಅರ್ಜಿಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು, ಹೆಣ್ಣುಮಕ್ಕಳ ದೇಹದ ಬಗ್ಗೆ ಉದ್ದೇಶಪೂರ್ವಕವಾಗಿ ಮತ್ತು ಅನುಚಿತವಾಗಿ ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ. ಇದರಿಂದ ಮಹಿಳೆಯ ಘನತೆಯ ಉಲ್ಲಂಘನೆಯಾಗಿದೆ. ಇದನ್ನು ಲೈಂಗಿಕ ಅಪರಾಧ ಎಂದೇ ಪರಿಗಣಿಸಬಹುದು. ಹೀಗಾಗಿ ಸ್ತ್ರೀಯರ ಬಗ್ಗೆ ಮಾತನಾಡುವಾಗ ಪುರುಷರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.

ಮಹಿಳೆಯ ಮಾಡಿದ್ದ ಆರೋಪವೇನು..?
ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯ ವಿರುದ್ದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು.

ಆತ ಕರ್ತವ್ಯದಲ್ಲಿರುವಾಗ ತನಗೆ ಮಾನಸಿಕ ಕಿರುಕುಳ ನೀಡಿದ್ದಾನೆ. 2013ರಿಂದ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆಕ್ಷೇಪಾರ್ಹ ಸಂದೇಶ ಹಾಗೂ ಕರೆಗಳನ್ನು ಮಾಡುತ್ತಿದ್ದಾನೆ. ನನ್ನ ದೇಹದ ಆಕಾರದ ಬಗ್ಗೆ ಅನುಚಿತವಾಗಿ ಹೇಳಿಕೆ ನೀಡಿದ್ದಾನೆ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದರು.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ಮನವಿ ಸಲ್ಲಿಸಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು.

ತಾನು ಮಹಿಳೆಯನ್ನು ‘ಸುಂದರವಾಗಿ ಇದ್ದೀಯ’ ಎಂದು ಹೊಗಳಿದ್ದೆ. ಆಕೆಯ ಮೈಮಾಟವನ್ನು ಬಣ್ಣಿಸಿದ್ದು ತಪ್ಪೇ? ಈ ಪ್ರಕರಣವನ್ನು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಬಾರದು ಎಂದು ವಾದಿಸಿ ತನ್ನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಆದರೆ ಮನವಿಯ ನಿರಾಕರಿಸಿದ ಹೈಕೋರ್ಟ್ ನ್ಯಾಯಪೀಠವು. ಹೆಣ್ಣಿನ ದೇಹ ಸೌಂದರ್ಯವನ್ನು ಉದ್ದೇಶಪೂರ್ವಕವಾಗಿ ಬಣ್ಣಿಸುವುದು ಅನುಚಿತವಾದದು. ಇದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಅಭಿಪ್ರಾಯ ಪಟ್ಟಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.