07/03/2026

Law Guide Kannada

Online Guide

ಹೆರಿಗೆ ರಜೆ ನಿರಾಕರಣೆ ಅಮಾನವೀಯ: 1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಚೆನ್ನೈ: ಕೋರ್ಟ್ ಕಚೇರಿ ಸಹಾಯಕಿಗೆ ಹೆರಿಗೆ ರಜೆ ನೀಡಲು ನಿರಾಕರಿಸಿದ್ದಕ್ಕೆ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ಇದೊಂದು ಅಮಾನವೀಯ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಮುನ್ಸಿಫ್ ಮತ್ತು ನ್ಯಾಯಿಕ ದಂಡಾಧಿಕಾರಿಗೆ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್. ಸುಬ್ರಹ್ಮಣ್ಯನ್ ಮತ್ತು ನ್ಯಾಯಮೂರ್ತಿ ಜಿ. ಆರುನ್ ಮುರುಗನ್ ಈ ಆದೇಶ ಹೊರಡಿಸಿದ್ದು, ಹೆರಿಗೆ ರಜೆ ನಿರಾಕರಣೆ ಅಮಾನವೀಯ ಘಟನೆ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಯನ್ನು ಸಹಿಸಲಾಗದು ಎಂದು ಬೇಸರ ವ್ಯಕ್ತಪಡಿಸಿದೆ.

ತಮಿಳುನಾಡಿನ ಕೋಡವಸಲ್ ಜಿಲ್ಲಾ ಮುನ್ಸಿಫ್ ಮತ್ತು ನ್ಯಾಯಿಕ ದಂಡಾಧಿಕಾರಿಯವರಿಗೆ ಕೋರ್ಟ್ ಕಚೇರಿ ಸಹಾಯಕಿ ಹೆರಿಗೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ರಜೆಯನ್ನು ನಿರಾಕರಿಸಲಾಗಿತ್ತು. ಅಲ್ಲದೆ ಮದುವೆಯಾಗಿಲ್ಲ ಮತ್ತು ಮದುವೆಗೆ ಮುಂಚಿತವಾಗಿ ಗರ್ಭಿಣಿಯಾಗಿದ್ದಾರೆ ಎಂಬ ಕಾರಣ ನೀಡಿ ಹೆರಿಗೆ ರಜೆಯನ್ನು ನಿರಾಕರಿಸಲಾಗಿದ್ದು, ವೈವಾಹಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್ ಐಆರ್ನ್ನು ಪರಿಗಣನೆ ಮಾಡಿರಲಿಲ್ಲ.

ದೇವಸ್ಥಾನದಲ್ಲಿ ನಡೆದಿದ್ದ ಮದುವೆ ಸಮಾರಂಭದ ಭಾವಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 28-01-2020ರಲ್ಲಿ ಪತಿಯನ್ನು ಕಳೆದುಕೊಂಡ ಕವಿತಾ, ಪತಿಯ ಮರಣಾನಂತರ ಭಾರತಿ ಎಂಬಾತನ ಜೊತೆ ಪ್ರೀತಿಯ ಬಲೆಗೆ ಬಿದ್ದಿದ್ದರು. ಆತ ಯುವ ವಿಧವೆಯನ್ನು ದೇವಸ್ಥಾನವೊಂದಲ್ಲಿ 28-04-2024ರಲ್ಲಿ ಮದುವೆಯಾಗಿದ್ದ. ಆ ಬಳಿಕ ಆಕೆ ಗರ್ಭಿಣಿಯಾಗಿದ್ದರು.

ಆದರೆ ಹೆರಿಗೆ ರಜೆಯನ್ನು ವಿವಾಹ ಪ್ರಮಾಣಪತ್ರ ನೀಡಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು. ತಮಿಳುನಾಡಿನ ಕೋಡವಸಲ್ ಜಿಲ್ಲಾ ಮುನ್ಸಿಫ್ ಮತ್ತು ನ್ಯಾಯಿಕ ದಂಡಾಧಿಕಾರಿಯವರ ಆದೇಶದಿಂದ ಬಾಧಿತರಾದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಹಿಳೆಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿವಾಹಿತ ಮಹಿಳೆಗೆ ಹೆರಿಗೆ ರಜೆ ನೀಡಬೇಕು ಎಂಬ ಸರ್ಕಾರಿ ಆದೇಶ ಇದ್ದರೂ, ಈ ಮದುವೆ ಕಡ್ಡಾಯ ನೋಂದಣಿ ಆಗಬೇಕು ಎಂದು ಎಲ್ಲೂ ಹೇಳಿಲ್ಲ ಎಂಬುದನ್ನು ಗಮನಿಸಿತು. ಗಂಭೀರ ತಕರಾರು ಇಲ್ಲದಿದ್ದರೆ ಹೆರಿಗೆ ರಜೆ ಕೇಳಲು ಯಾವುದೇ ದಾಖಲೆಯನ್ನು ಹಾಜರುಪಡಿಸಬೇಕಿಲ್ಲ ಎಂದು ನ್ಯಾಯಪೀಠ ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಅರ್ಜಿದಾರರು ತನ್ನ ಪ್ರಿಯಕರ ಭಾರತಿ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹಿರಿಯರು, ಹಿತೈಷಿಗಳು ಅರ್ಜಿದಾರರು ದೇವಸ್ಥಾನದಲ್ಲಿ ಮದುವೆಯಾಗಿರುವುದನ್ನು ನ್ಯಾಯಾಲಯದ ಮುಂದೆ ದೃಢಪಡಿಸಿದ್ದಾರೆ. ಮದುವೆಯ ಭಾವಚಿತ್ರ ಮತ್ತು ಆಹ್ವಾನ ಪತ್ರವನ್ನೂ ಹಾಜರುಪಡಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

ಈ ದಾಖಲೆಗಳ ಆಧಾರದಲ್ಲಿ ಜಿಲ್ಲಾ ಮುನ್ಸಿಫ್ ಮತ್ತು ನ್ಯಾಯಿಕ ದಂಡಾಧಿಕಾರಿ ಸೂಕ್ತ ಆದೇಶ ಹೊರಡಿಸಬಹುದಿತ್ತು. ಆದರೆ, ಹೆರಿಗೆಯ ಘಟನೆಯನ್ನೇ ಅದು ಸಂಶಯದಿಂದ ನೋಡಿದ್ದು, ಮದುವೆಯ ಬಗ್ಗೆ ಯಾವುದೇ ತಕರಾರು ಇಲ್ಲದ ಕಾರಣ, ಹೆರಿಗೆ ರಜೆಯ ಅರ್ಜಿಯನ್ನು ಪುರಸ್ಕರಿಸಬಹುದಿತ್ತು ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಹೆರಿಗೆ ರಜೆಯನ್ನು ವಿವಾಹಿತ ಮಹಿಳೆಯರೇ ಕೋರಬೇಕು. ಆದರೆ, ಅದಕ್ಕೆ ದಾಖಲೆ ನೀಡಲೇ ಬೇಕು ಎಂಬ ಕಠಿಣವಾದ ಕ್ರಮಗಳನ್ನು ಕೈಗೊಂಡ ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕಿದೆ ಎಂದು ಹೇಳಿದ ನ್ಯಾಯಪೀಠ, ಸದ್ರಿ ಪ್ರಕರಣದಲ್ಲಿ ಹೆರಿಗೆ ರಜೆ ನಿರಾಕರಣೆಯಿಂದ ಮಹಿಳೆ ತೀವು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಉದ್ಯೋಗದಾತ ದಂಡ ತೆರಲೇಬೇಕು. ನಾಲ್ಕು ವಾರದೊಳಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೈಕೋರ್ಟ್ ನ್ಯಾಯಪೀಠ ರಿಜಿಸ್ಟ್ರಿಗೆ ಆದೇಶ ಹೊರಡಿಸಿತು.

ಆಕೆಗೆ ಹೆರಿಗೆ ರಜೆಯ ಸಂದರ್ಭದಲ್ಲಿ ಪೂರ್ಣ ವೇತನ ಹಾಗೂ ಎಲ್ಲ ಸೌಲಭ್ಯಗಳನ್ನು ತಪ್ಪದೆ ನೀಡುವಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ತಿರುವರೂರು ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.