05/03/2026

Law Guide Kannada

Online Guide

ನೌಕರನ ವಾದ ಆಲಿಸಿದೇ ವಜಾಗೊಳಿಸುವುದು ಕಾನೂನು ಬಾಹಿರ: ಮರು ನೇಮಕಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ನೌಕರನ ಮೇಲೆ ಗಂಭೀರ ಆರೋಪಗಳಿದ್ದರೂ ಆತನ ಸೇವೆಯಿಂದ ವಜಾಗೊಳಿಸಲು ವಿಚಾರಣೆ ಕಡ್ಡಾಯ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನೌಕರನನ್ನು ಮರು ನೇಮಕ ಮಾಡಿಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೂಚನೆ ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಎನ್ಡಬ್ಲ್ಯುಕೆಆರ್ಟಿಸಿ) ತನ್ನ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಧಾರವಾಢ ಪೀಠದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠವು , ನೌಕರನ ಮೇಳೆ ಗಂಭೀರ ಆರೋಪಗಳಿದ್ದರೂ ಸೂಕ್ತ ಇಲಾಖಾ ವಿಚಾರಣೆ ನಡೆಸದೆ ಆತನ ವಾದ ಆಲಿಸದೆ ಸೇವೆಯಿಂದ ವಜಾ ಮಾಡುವುದು ಕಾನೂನು ಬಾಹಿರ. ಆತನನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು ಎಂದು ಆದೇಶಿಸಿತು.

ಏನಿದು ಪ್ರಕರಣ..
ಬೆಳಗಾವಿಯ ಗೋಕಾಕ್ ತಾಲೂಕಿನ ಸಂಜುಕುಮಾರ್ ಎಂಬುವರು ನಿಗಮದ ನೌಕರರಾಗಿದ್ದ ತಂದೆಯ ನಿಧನದ ನಂತರ ಅನುಕಂಪದ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಈ ಮದ್ಯೆ ಇವರ ವಿರುದ್ದ ಕೆಲಸಕ್ಕೆ ಸೇರುವಾಗ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಎನ್ಡಬ್ಲ್ಯುಕೆಆರ್ಟಿಸಿ 2024ರ ಡಿ.13ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನೌಕರನ ಮೇಲೆ ನಕಲಿ ದಾಖಲೆ ನೀಡಿದ ಆರೋಪವಿದ್ದಾಗ, ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇಲಾಖಾ ವಿಚಾರಣೆ ನಡೆಸುವುದು ಮತ್ತು ನೌಕರನಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿತು.

ನೌಕರನು ಪ್ರೊಬೇಷನರಿ ಅವಧಿಯಲ್ಲಿದ್ದರೂ, ಆತನ ವಜಾ ಆದೇಶವು ಶಿಕ್ಷಾರ್ಹ ರೂಪದಲ್ಲಿದ್ದರೆ, ಅದಕ್ಕೂ ಮುನ್ನ ವಿಚಾರಣೆ ನಡೆಸಲೇಬೇಕು ಎಂಬ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನುಉಲ್ಲೇಖಿಸಿದ ನ್ಯಾಯಪೀಠವು, ಅರ್ಜಿದಾರರ ವಜಾ ಆದೇಶವನ್ನು ರದ್ದುಪಡಿಸಿತು. ಅಲ್ಲದೆ ತಕ್ಷಣವೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ನಿಗಮಕ್ಕೆ ನಿರ್ದೇಶನ ನೀಡಿ ಇಲಾಖಾ ವಿಚಾರಣೆ ನಡೆಸಿ ಪ್ರಕರಣವನ್ನು ಕಾನೂನುಬದ್ಧವಾಗಿ ನಿರ್ಧರಿಸುವ ಸ್ವಾತಂತ್ರ್ಯ ನಿಗಮಕ್ಕಿದೆ ಎಂದು ಅಭಿಪ್ರಾಯಪಟ್ಟಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.