07/03/2026

Law Guide Kannada

Online Guide

ಎರಡು ತಿಂಗಳುಗಳಲ್ಲಿ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸಿ: ಎಲ್ಲಾ ಕೋರ್ಟ್ ಗಳಿಗೆ ಸುಪ್ರೀಂ ಸೂಚನೆ

ನವದೆಹಲಿ: ಕಕ್ಷಿದಾರರಿಂದಲೇ ವಿಳಂಬಗೊಳ್ಳುವ ಪ್ರಕರಣಗಳನ್ನು ಹೊರತುಪಡಿಸಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಅವುಗಳ ಸಲ್ಲಿಕೆಯ ಎರಡು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಎಲ್ಲಾ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. ಆಸ್ತಿ ದಾಖಲೆಗಳಲ್ಲಿ ವಂಚನೆ ಮತ್ತು ಫೋರ್ಜರಿ ಆರೋಪವನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಇಬ್ಬರು ಕಂದಾಯ ಅಧಿಕಾರಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶನಗಳನ್ನು ಹೊರಡಿಸಿದೆ.

ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧದ ಗಂಭೀರ ಆರೋಪಗಳನ್ನು ಪರಿಗಣಿಸಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಹೇಳಿತಾದರೂ ಅವರ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವು ಸಮರ್ಥನೀಯವಲ್ಲ ಎಂದು ಬೆಟ್ಟು ಮಾಡಿತು.

ನಿಯಮಿತ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸಲ್ಲಿಸಿದ ದಿನದಿಂದ ಎರಡು ತಿಂಗಳೊಳಗೆ ತ್ವರಿತವಾಗಿ ಅವುಗಳನ್ನು ಇತ್ಯರ್ಥಪಡಿಸಬೇಕು. ಆರೋಪಿಗಳು ಅನಿಶ್ಚಿತತೆಯಲ್ಲಿ ಸಿಲುಕಿರುವಾಗ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವರ್ಷಾನುಗಟ್ಟಲೆ ಬಾಕಿ ಇಡಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಮಹತ್ವವನ್ನು ಒತ್ತಿ ಹೇಳಿದ ನ್ಯಾಯಪೀಠವು ಪೀಠವು,ಜಾಮೀನು ಅರ್ಜಿಗಳನ್ನು ಬಾಕಿಯುಳಿಸುವುದು ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ನೇರವಾಗಿ ಧಕ್ಕೆಯನ್ನುಂಟು ಮಾಡುತ್ತದೆ.

ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಅರ್ಹತೆ ಆಧಾರದ ಮೇಲೆ ತ್ವರಿತವಾಗಿ ನಿರ್ಧರಿಸಬೇಕು. ಕಕ್ಷಿದಾರರನ್ನು ಅನಿರ್ದಿಷ್ಟಾವಧಿ ಬಾಕಿ ಉಕಲಿಯುವ ಸ್ಥಿತಿಗೆ ದೂಡಬಾರದು ಎಂಬುದು ನ್ಯಾಯಾಲಯದ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಅರ್ಜಿ ವಿಲೇವಾರಿಗೊಳಿಸದೆ ದೀರ್ಘಕಾಲ ವಿಳಂಬಗೊಳಿಸುವುದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಉದ್ದೇಶವನ್ನು ನಿರಾಶೆಗೊಳಿಸುವುದಲ್ಲದೆ, ನ್ಯಾಯದ ನಿರಾಕರಣೆಗೆ ಸಮನಾಗಿದ್ದು ಸಂವಿಧಾನದ 14 ಮತ್ತು 21ನೇ ವಿಧಿಯಲ್ಲಿ ಹೇಳಲಾದ ನೀತಿಗೆ ವಿರುದ್ಧ ಎಂದು ನ್ಯಾಯಾಪೀಠ ಹೇಳಿದೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಪ್ರಕಾರ, ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ 2.6 ಲ.ಕ್ಕೂ ಅಧಿಕ ಜಾಮೀನು ಅರ್ಜಿಗಳು ಬಾಕಿಯಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.