ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕಿದೆಯೋ? ಇಲ್ಲವೋ? ಹೈಕೋರ್ಟ್ ನಿಲುವಿದು…?
ಬೆಂಗಳೂರು: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕಿದೆಯೋ? ಇಲ್ಲವೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿರುವ ಕೆಲವು ಅಸ್ಪಷ್ಟತೆಗಳು ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಅಂತರಗಳನ್ನು ಸರಿಪಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಕೇಳಿದೆ.
ಈ ಸಂಬಂಧ ತೀರ್ಪಿನ ಪ್ರತಿಯನ್ನು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೂ ಕಳುಹಿಸಲಾಗಿದ್ದು, ವಿಧವೆಯರು ಮತ್ತು ತಾಯಂದಿರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಸ್ಪಷ್ಟತೆ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬರುವ ಮೊದಲು ಹಿಂದೂ ಸಮಾಜದಲ್ಲಿ ಮಿತಾಕ್ಷರ ಮತ್ತು ದಯಾಭಾಗ ಎಂಬ ವಿಭಿನ್ನ ಪದ್ಧತಿಗಳು ಇದ್ದು, ಅವು ಮಹಿಳೆಯರಿಗೆ ಸೀಮಿತ ಹಕ್ಕುಗಳನ್ನು ಮಾತ್ರ ನೀಡುತ್ತಿದ್ದವು. ಸ್ವಾತಂತ್ರ್ಯ ನಂತರ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಏಕರೂಪದ ಕಾನೂನು ಅಗತ್ಯವೆಂದು ಸರ್ಕಾರ ಕಂಡು ಈ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಸಮುದಾಯಗಳಿಗೆ ಅನ್ವಯಿಸುತ್ತದೆ. ಇದು ಸ್ವಯಂ ಸಂಪಾದಿಸಿದ ಆಸ್ತಿ ಮತ್ತು ಪೂರ್ವಜರ ಆಸ್ತಿ ಎಂಬ ಎರಡು ವಿಭಾಗಗಳಲ್ಲಿ ಉತ್ತರಾಧಿಕಾರವನ್ನು ನಿಯಂತ್ರಿಸುತ್ತದೆ. ಒಬ್ಬ ವ್ಯಕ್ತಿ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿಯನ್ನು ಅವನ ಆಸ್ತಿ ಮೊದಲು ಹೆಂಡತಿ, ಮಗ, ಮಗಳು ಮತ್ತು ತಾಯಿ ಸೇರಿರುವ ವರ್ಗ-I ಉತ್ತರಾಧಿಕಾರಿಗಳಿಗೆ ಸಮಾನವಾಗಿ ಹಂಚಲಾಗುತ್ತದೆ. ಈ ವರ್ಗದವರು ಇಲ್ಲದಿದ್ದರೆ, ಆಸ್ತಿ ವರ್ಗ-II ಉತ್ತರಾಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.
ಮಹಿಳೆಯರ ಹಕ್ಕುಗಳ ವಿಷಯದಲ್ಲಿ 2005ರ ತಿದ್ದುಪಡಿ ಜಾರಿಗೆ ತಂದಿದ್ದು, ಈ ತಿದ್ದುಪಡಿಯ ಬಳಿಕ, ಹೆಣ್ಣುಮಕ್ಕಳು ಹುಟ್ಟಿನಿಂದಲೇ ಪೂರ್ವಜರ ಆಸ್ತಿಯಲ್ಲಿ ಪುತ್ರರಂತೆ ಸಮಾನ ಹಕ್ಕು ಪಡೆದರು. ಅವರು ಕುಟುಂಬದ ಕರ್ತಾ ಆಗುವ ಹಕ್ಕೂ ಹೊಂದಿದ್ದಾರೆ. ತಂದೆ 2005ರ ಮೊದಲು ಅಥವಾ ನಂತರ ನಿಧನರಾಗಿದ್ದರೂ, ಹೆಣ್ಣುಮಕ್ಕಳಿಗೆ ಈ ಹಕ್ಕು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
