ಅಕ್ರಮ ನಿವೇಶನ ಹಂಚಿಕೆ ಕ್ರಯಪತ್ರ ರದ್ದುಪಡಿಸುವ ಅಧಿಕಾರ ಸಹಕಾರಿ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಇದೆಯೇ?
ಬೆಂಗಳೂರು : ಗೃಹ ನಿರ್ಮಾಣ ಸಹಕಾರ ಸಂಘ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದ್ದರೆ ಅಂತಹ ವೇಳೆ ಕ್ರಯಪತ್ರ ರದ್ದುಪಡಿಸುವ ಅಧಿಕಾರ ಸಹಕಾರಿ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು ದಕ್ಷಿಣದ ಚನ್ನಸಂದ್ರದಲ್ಲಿರುವ ಬಿಇಎಂಎಲ್ ಲೇಔಟ್ ವಸತಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಮಾರಾಟ ಕ್ರಯಪತ್ರ (ಸೇಲ್ ಡೀಡ್) ಆದ ನಂತರ ರಿಜಿಸ್ಟ್ರಾರ್ ಗೆ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲವೆಂದು ಆಕ್ಷೇಪಿಸಿ ನಗರದ ಸುರೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಗೃಹ ನಿರ್ಮಾಣ ಸಹಕಾರ ಸಂಘ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದ್ದ ಸಂದರ್ಭಗಳಲ್ಲಿ ಸಹಕಾರಿ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಅಕ್ರಮ ಹಂಚಿಕೆಯ ಕ್ರಯಪತ್ರ ರದ್ದುಗೊಳಿಸುವ ಅಧಿಕಾರವಿದೆ ಎಂದು ತೀರ್ಪು ಪ್ರಕಟಿಸಿದೆ.
ನಿವೇಶನ ಹಂಚಿಕೆ ಅಕ್ರಮವೆಂದು ಕಂಡುಬಂದರೆ ರಿಜಿಸ್ಟ್ರಾರ್ ಅಂತಹ ಹಂಚಿಕೆಯನ್ನು ರದ್ದುಗೊಳಿಸಬಹುದು ಮತ್ತು ಆನಂತರ ಆ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಸಬ್ ರಿಜಿಸ್ಟ್ರಾರ್ ಜತೆ ಹಂಚಿಕೊಳ್ಳಬಹುದು. ಆದರೆ, ನಿಯಮಗಳನ್ನು ಪಾಲನೆ ಮಾಡಬೇಕಷ್ಟೇ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಏನಿದು ವ್ಯಾಜ್ಯ..?
ಇದು ಬೆಂಗಳೂರು ದಕ್ಷಿಣದ ಚನ್ನಸಂದ್ರ ಗ್ರಾಮದಲ್ಲಿ 4,026 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ ಸಂಬಂಧಿಸಿದ ವ್ಯಾಜ್ಯವಾಗಿದ್ದು, ವಿವಾದಿತ ನಿವೇಶನವನ್ನು ಮೂಲತಃ ಬಿಇಎಂಎಲ್ ನೌಕರರ ಸಹಕಾರ ಸಂಘವು ತನ್ನ ಸದಸ್ಯ ಬಿ.ಎಂ. ಯೋಗೇಶ್ ಗೆ ಹಂಚಿಕೆ ಮಾಡಿತ್ತು. 2013ರ ಜನವರಿ 19ರಂದು ಕ್ರಯಪತ್ರ ನೋಂದಣಿ ಮಾಡಿಸಲಾಗಿತ್ತು. ತಕ್ಷಣವೇ ಆ ನಿವೇಶನವನ್ನು ಸುರೇಶ್ ಮತ್ತು ಭಾಸ್ಕರ್ಗೆ ಮಾರಾಟ ಮಾಡಲಾಗಿತ್ತು. ಭಾಸ್ಕರ್ ಅವರು 2015ರಲ್ಲಿ ತಮ್ಮ ಪಾಲನ್ನು ಬಿಟ್ಟುಕೊಟ್ಟಿದ್ದರಿಂದ ನಿವೇಶನದ ಸಂಪೂರ್ಣ ಮಾಲೀಕತ್ವ ಹೊಂದಿದ ಸುರೇಶ್ ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಆರಂಭಿಸಿದರು. ಆನಂತರ, ಸಹಕಾರ ಸಂಘವು ಹಿರಿತನದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಯೋಗೇಶ್ ಗೆ ನೀಡಿದ ಮೂಲ ಹಂಚಿಕೆ ಕಾನೂನುಬಾಹಿರವಾಗಿದೆ ಎಂದು ನಿರ್ಧರಿಸಿತ್ತು. ಜತೆಗೆ, ಕ್ರಯಪತ್ರ ರದ್ದುಗೊಳಿಸುವಂತೆ ಮತ್ತು ಶೇ.18ರ ಬಡ್ಡಿಯೊಂದಿಗೆ 62 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕ್ರಯಪತ್ರ ಮಾಡಿಕೊಟ್ಟಿದ್ದ ಹಿಂದಿನ ಸೊಸೈಟಿ ಪದಾಧಿಕಾರಿಗಳಾದ ಜೆ. ಮುನ್ನಾಗಪ್ಪ (ಅಧ್ಯಕ್ಷರು) ಮತ್ತು ಎನ್. ರಾಮಕೃಷ್ಣ (ಉಪಾಧ್ಯಕ್ಷ ರು) ಅವರಿಂದ ವಸೂಲಿ ಮಾಡುವಂತೆ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಸೊಸೈಟಿ ಮನವಿ ಸಲ್ಲಿಸಿತ್ತು.
ಆ ಮನವಿಯನ್ನು ಹೆಚ್ಚುವರಿ ರಿಜಿಸ್ಟ್ರಾರ್ ತಿರಸ್ಕರಿಸಿದ್ದರು. ನಂತರ ಕರ್ನಾಟಕ ಮೇಲ್ಮನವಿ ಪ್ರಾಧಿಕಾರವು ವಿಷಯವನ್ನು ಹೊಸದಾಗಿ ಪರಿಶೀಲಿಸಿ ತೀರ್ಮಾನಿಸುವಂತೆ ಹೆಚ್ಚುವರಿ ರಿಜಿಸ್ಟ್ರಾರ್ ಗೆ 2020ರ ಜುಲೈ 9ರಂದು ನಿರ್ದೇಶಿಸಿತ್ತು. ಈ ನಿರ್ದೇಶನವನ್ನು ಸುರೇಶ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿ ನೋಂದಾಯಿತ ಕ್ರಯಪತ್ರದ ಮೇಲೆ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಅಧಿಕಾರ ವ್ಯಾಪ್ತಿ ಇಲ್ಲ ಹಾಗೂ ತಾವು ಮತ್ತು ಭಾಸ್ಕರ್ ಸೊಸೈಟಿಯ ಸದಸ್ಯರಲ್ಲ. ಆದ್ದರಿಂದ, ನಿವೇಶನದ ಕ್ರಯಪತ್ರ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ಸೊಸೈಟಿಯು, ಆಡಳಿತ ಮಂಡಳಿಯು ಕಾನೂನುಬಾಹಿರವಾಗಿ ವರ್ತಿಸಿರುವುದರಿಂದ ಮತ್ತು ರಿಜಿಸ್ಟ್ರಾರ್ ಗೆ ಮಧ್ಯಪ್ರವೇಶಿಸುವ ಅಧಿಕಾರವಿರುವುದರಿಂದ ಸಿವಿಲ್ ನ್ಯಾಯಾಲಯ ಮಾತ್ರ ಈ ವಿಷಯವನ್ನು ನಿರ್ಧರಿಸಬಹುದು ಎಂದು ವಾದಿಸಿತ್ತು.
ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ನಿವೇಶನ ಅಕ್ರಮ ಹಂಚಿಕೆ ರದ್ದು ಮಾಡುವ ಅಧಿಕಾರ ಸಹಕಾರಿ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಇದೆ. ರದ್ದತಿ ನಂತರ ಅಗತ್ಯವಿರುವ ಮುಂದಿನ ಕ್ರಮ ಜರುಗಿಸಲು ಸಂಬಂಧಪಟ್ಟ ರಿಜಿಸ್ಟ್ರಾರ್, ಆಯಾ ಪ್ರದೇಶ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಗೆ ಅಗತ್ಯ ಸೂಚನೆಯನ್ನು ಕಳುಹಿಸಬಹುದು. ಹಾಗೆ ಮಾಡುವ ಮೊದಲು, ಅಕ್ರಮ ಹಂಚಿಕೆಯನ್ನು ಯಾರ ಪರವಾಗಿ ಮಾಡಲಾಗಿದೆಯೋ ಅವರ ವಿಚಾರಣೆಯನ್ನು ನಡೆಸಬೇಕಾಗುತ್ತದೆ. ಕರ್ನಾಟಕ ಸಹಕಾರಿ ಸಂಘಗಳ (ಕೆಸಿಎಸ್ ಕಾಯ್ದೆಯ ಸೆಕ್ಷನ್ 70ರ ಅಡಿಯಲ್ಲಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರ ಅಧಿಕಾರ ಅಪರಿಮಿತವಾಗಿದೆ. ಸಿಎಸ್ ಕಾಯ್ದೆ ಕೆಸಿಎಸ್ ನಿಯಮಗಳು, ಸೊಸೈಟಿಯ ಬೈಲಾಗಳು ಅಥವಾ ಅಂಥದೇ ಉಲ್ಲಂಘನೆಯ ಆರೋಪವಿಲ್ಲದಿದ್ದಾಗ ಸದಸ್ಯರು ಮತ್ತು ಮೂರನೇ ವ್ಯಕ್ತಿಯ ನಡುವಿನ ವಹಿವಾಟು ಸಂಬಂಧ ಸೆಕ್ಷನ್ 70ರ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
