19/05/2025

Law Guide Kannada

Online Guide

ಮಾವನ ಆಸ್ತಿಯಲ್ಲಿ ಅಳಿಯನಿಗೂ ಸಿಗುತ್ತಾ ಪಾಲು..? ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್​

ನವದೆಹಲಿ: ಮಾವನ ಆಸ್ತಿ ಮೇಲೆ ಕಣ್ಣು ಹಾಕುವ ಅಳಿಯಂದಿರೇ ಹೆಚ್ಚು. ಆಸ್ತಿ ವಿಚಾರಕ್ಕೆ ಮಾವ ಹಾಗೂ ಅಳಿಯಂದಿರ ನಡುವೆ ಮನಸ್ತಾಪ ಬರುತ್ತೆ. ಇದೇ ವಿಚಾರದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತನ್ನ ಮಾವನ ಆಸ್ತಿಯ ಮೇಲೆ ಅಳಿಯನಿಗೆ ಹಕ್ಕುಗಳು ಇದೆಯೇ ಎಂಬ ಬಗ್ಗೆ ಪ್ರಕರಣದ ವಿಚಾರಣೆ ನಡೆಸುವಾಗ ಒಂದು ಪ್ರಮುಖ ತೀರ್ಪನ್ನು ನೀಡಿದೆ. ಒಬ್ಬ ವೃದ್ಧ ವ್ಯಕ್ತಿ ತನ್ನ ಅಳಿಯ ತನ್ನ ಮನೆಯನ್ನು ಆಕ್ರಮಿಸಿಕೊಂಡಿದ್ದಾನೆ ಎಂದು ಕೇಸ್ ದಾಖಲಿಸಿದ್ದರು.

ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಈ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಲಾಗಿದೆ.

ಆಸ್ತಿ ವಿವಾದ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತನ್ನ ಆದೇಶದಲ್ಲಿ ‘ಪೋಷಕರ ನಿರ್ವಹಣೆ ಕಾಯಿದೆಯಡಿಯಲ್ಲಿ, ಮಾವನಾದವರು ಅಳಿಯನಿಗೆ (Father in Law-Son in Law) ಮನೆ ಖಾಲಿ ಮಾಡುವಂತೆ ಹೇಳಬಹುದು’ ಎಂದು ಹೇಳಿದೆ. ಮಾವ ಮನೆ ಖಾಲಿ ಮಾಡಲು ಹೇಳಿದಂತೆ, ಈ ಹಿಂದೆ ನೀಡಿದ್ದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಭೋಪಾಲ್‌ನ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರಿದ್ದ ಪೀಠ, ಈ ಅರ್ಜಿಯನ್ನು ತಿರಸ್ಕರಿಸಿ 30 ದಿನಗಳೊಳಗೆ ಮನೆ ಖಾಲಿ ಮಾಡುವಂತೆ ಅಳಿಯನಿಗೆ ಆದೇಶ ನೀಡಿದೆ.

ಏನಿದು ಘಟನೆ..

ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ತನ್ನ ಮಾವನ ಮನೆಯಲ್ಲಿ ವಾಸ ಮಾಡುತಿದ್ದು ಈ ಮಧ್ಯೆ ಆತನ ಮಾವ ಎಸ್‌ಡಿಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆತನನ್ನು ಮನೆಯಿಂದ ಖಾಲಿ ಮಾಡಿಸಬೇಕೆಂದು ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಮನೆ ಖಾಲಿ ಮಾಡುವಂತೆ ಆದೇಶ ಬಂದಾಗ, ದಿಲೀಪ್ ಭೋಪಾಲ್ ಕಲೆಕ್ಟರ್‌ ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಅದನ್ನು ತಿರಸ್ಕರಿಸಲಾಯಿತು.

ಇದರ ನಂತರ, ಅಳಿಯ ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದರು. ಮಾವ ವಾಸವಾಗಿರುವ ಮನೆ ಕಟ್ಟಲು 10 ಲಕ್ಷ ರೂ. ಪಾವತಿಸಿದ್ದೇನೆ. ಈ ಮನೆಯಲ್ಲಿ ನನಗೂ ಹಕ್ಕಿದೆ ಎಂದು ಅಳಿಯ ವಾದಿಸಿದ್ದರು. ಆದರೆ ನ್ಯಾಯಾಲಯವು ಅಳಿಯನಿಗೆ ಆ ಮನೆ ಖಾಲಿ ಮಾಡುವಂತೆ ಕೋರ್ಟ್ ಆದೇಶಿಸಿದೆ.

ಹೈಕೋರ್ಟ್‌ ಪರಿಶೀಲನೆ ನಡೆಸಿ, ಅಳಿಯನಿಗೆ, ಮಾವನ ಮನೆಯಲ್ಲಿ ಕೇವಲ ವಾಸಿಸಲು ಮಾತ್ರ ಅವಕಾಶ ಆಸ್ತಿಯಲ್ಲಿ ಪಾಲು ಸಿಗಲ್ಲ ಎಂದು ತಿಳಿಸಿದೆ.
ದಿಲೀಪ್‌ಗೆ ಅವರ ಮಾವ ಮನೆಯಲ್ಲಿ ವಾಸಿಸಲು ಮಾತ್ರ ಅವಕಾಶ ನೀಡಿದ್ದಾರೆ . ಅಳಿಯನ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದರೆ ಆತ ಅದರ ಮೇಲೆ ತಮ್ಮ ಹಕ್ಕನ್ನು ಪಡೆಯಬಹುದು. ಆದರೆ ಅವರಿಗೆ ಆಸ್ತಿಯಲ್ಲಿ ವಾಸಿಸಲು ಮಾತ್ರ ಅವಕಾಶವಿದ್ದರೆ ಆತ ಆಸ್ತಿಯ ಮೇಲೆ ತಮ್ಮ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.