ಮಾವನ ಆಸ್ತಿಗಳಿಗೆ ಅಳಿಯನಿಗೆ ಉತ್ತರಾಧಿಕಾರತ್ವ ಸಿಗುತ್ತದೆಯೇ..? ಕೋರ್ಟ್ ಹೇಳೋದೇನು..?

ಬೆಂಗಳೂರು: ಮಾವ ( ಹೆಂಡತಿಯ ಅಪ್ಪ) ಮೃತಪಟ್ಟರೆ ಮಾವನ ಆಸ್ತಿಗಳಿಗೆ ಅಳಿಯನಿಗೆ ಉತ್ತರಾಧಿಕಾರತ್ವ ಸಿಗುತ್ತದೆಯೇ..? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೃತ ಮಾವನಿಗೆ ನಾಲ್ಕು ಹೆಣ್ಣು ಮಕ್ಕಳಿರುವುದರಿಂದ ತನ್ನನ್ನೇ ಮೃತ ಮಾವ ಆಸ್ತಿಯನ್ನು ಪ್ರತಿನಿಧಿಸಲು ಮತ್ತು ಹಿತಾಸಕ್ತಿ ರಕ್ಷಣೆ ಮಾಡಲು ಕಾನೂನುಬದ್ಧ ಉತ್ತರಾಧಿಕಾರಿ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ವ್ಯಕ್ತಿಯೋರ್ವ (ಮೃತನ ಮೊದಲ ಪುತ್ರಿ ಯ ಪತಿ) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಮಾವನ ಆಸ್ತಿಗಳಿಗೆ ಅಳಿಯ ಉತ್ತರಾಧಿಕಾರಿಯಲ್ಲ ಎಂದು ತೀರ್ಪು ನೀಡಿದೆ.
ಅರ್ಜಿದಾರರಾದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ನಿವಾಸಿ ಬಸವರಾಜು ಎಂಬುವವರು ತನ್ನದೇ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ಮಾವನ ಆಸ್ತಿಯಲ್ಲಿ ಪತ್ನಿಗೆ ಪಾಲು ನೀಡಲು ಆದೇಶಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಮಾವ (ಪತ್ನಿಯ ತಂದೆ) ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ತಾನೇ ಮಾವನ ಮನೆಗೆ ಮನೆ ಅಳಿಯ, ಅವರ ಆಸ್ತಿಯನ್ನು ಪ್ರತಿನಿಧಿಸುವ ಕಾನೂನು ಬದ್ಧ ಉತ್ತರಾಧಿಕಾರಿಯಾಗಿ ನನ್ನನ್ನೇ ಘೋಷಣೆ ಮಾಡಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನಗಂಟಿ ಅವರ ಪೀಠವು, ಕಾನೂನುಬದ್ಧ ಉತ್ತರಾಧಿಕಾರಿ ಮಾತ್ರ ಮೃತಪಟ್ಟ ವ್ಯಕ್ತಿಯ ಆಸ್ತಿ ಪ್ರತಿನಿಧಿಸುವ ಮತ್ತು ಹಿತಾಸಕ್ತಿ ರಕ್ಷಣೆ ಮಾಡುವ ಜವಾಬ್ದಾರಿ/ಕರ್ತವ್ಯ ಹೊಂದಿರುತ್ತಾನೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು . ಮೃತರ ಆಸ್ತಿಯಲ್ಲಿ ಭಾಗಕ್ಕೆ ಅರ್ಹರಾಗಿದ್ದಾರೆಯೇ ಹೊರತು ಉತ್ತರಾಧಿಕಾರಿಯಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ