‘ಮಿತಿ ಮೀರಬೇಡಿ, ನ್ಯಾಯಾಂಗದ ಬಗ್ಗೆ ದೇಶ ಹೊತ್ತಿ ಉರೀತಿದೆ’: ಜಡ್ಜ್ ಗೆ ಎಚ್ಚರಿಕೆ ನೀಡಿದ ಅಡ್ವೋಕೇಟ್ ವಿರುದ್ದ ಕೇಸ್
ರಾಂಚಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣದ ನೆನಪು ಮಾಸುವ ಮುನ್ನವೇ ಇದೀಗ ಅಂತಹದ್ದೇ ರೀತಿಯ ಮತ್ತೊಂದು ಪ್ರಕರಣ ಜಾರ್ಖಂಡ್ ಹೈಕೋರ್ಟ್ನಲ್ಲಿ ನಡೆದಿದೆ.
ಹೌದು ಹಿರಿಯ ವಕೀಲರೊಬ್ಬರು ಹೈಕೋರ್ಟ್ ನ್ಯಾಯಾಧೀಶರಿಗೆ ‘ಮಿತಿ ಮೀರಬೇಡಿ, ನ್ಯಾಯಾಂಗದ ಬಗ್ಗೆ ದೇಶ ಹೊತ್ತಿ ಉರೀತಿದೆ’ ಎಂದು ಎಚ್ಚರಿಸಿದ ಘಟನೆ ಅಕ್ಟೋಬರ್ 16ರಂದು ರಾಂಚಿಯಲ್ಲಿರುವ ಜಾರ್ಖಂಡ್ ಹೈಕೋರ್ಟ್ ನ ಕೋರ್ಟ್ ರೂಮ್ 24ರಲ್ಲಿ ನಡೆದಿದೆ.
ವಿಚಾರಣೆಯ ಸಂದರ್ಭದಲ್ಲಿ ವಕೀಲ ಮಹೇಶ್ ತಿವಾರಿ ಮತ್ತು ನ್ಯಾಯಮೂರ್ತಿ ರಾಜೇಶ್ ಕುಮಾರ್ ನಡುವೆ ನಡೆದ ತೀವ್ರ ವಾಗ್ವಾದದ ಈ ವೀಡಿಯೊ ವೈರಲ್ ಆಗಿದ್ದು, ಜಾರ್ಖಂಡ್ ಹೈಕೋರ್ಟ್ ವಕೀಲ ಮಹೇಶ್ ತಿವಾರಿ ವಿರುದ್ದ ಸ್ವಯಂಪ್ರೇರಿತ ನ್ಯಾಯಾಲಯ ನಿಂದನೆ ಪ್ರಕರಣವನ್ನು ದಾಖಲಿಸಿದೆ.
ಏನಿದು ಘಟನೆ…?
ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಹೈ ಕೋರ್ಟ್ ರೂಮ್ 24ರಲ್ಲಿ ನಡೆಯುತ್ತಿತ್ತು. ಗ್ರಾಹಕರ ಪರ ವಕೀಲ ಮಹೇಶ್ ತಿವಾರಿ ವಕಾಲತು ವಹಿಸಿಕೊಂಡು ವಾದಿಸುತ್ತಿದ್ದರು.
ವಿಚಾರಣೆಯ ಸಮಯದಲ್ಲಿ, ತಿವಾರಿ ತಮ್ಮ ಕಕ್ಷಿದಾರರು ಮರು ಸಂಪರ್ಕಕ್ಕೆ 25,000 ರೂ.ಗಳನ್ನು ಠೇವಣಿ ಇಡಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದಾಗ್ಯೂ, ನ್ಯಾಯಮೂರ್ತಿ ಕುಮಾರ್ ಒಟ್ಟು ಬಾಕಿ ಮೊತ್ತದ ಶೇಕಡಾ 50 ರಷ್ಟು ಠೇವಣಿ ಇಡಬೇಕಾದ ನ್ಯಾಯಾಂಗ ಪೂರ್ವನಿದರ್ಶನವನ್ನು ಉಲ್ಲೇಖಿಸಿದರು. ವಕೀಲರು ತಮ್ಮ ಕಕ್ಷಿದಾರರಿಂದ 50,000 ರೂ. ಠೇವಣಿ ಇಡಲು ಒಪ್ಪಿಕೊಂಡ ನಂತರ ಈ ವಿಷಯ ಇತ್ಯರ್ಥವಾಯಿತು.
ತಿವಾರಿ ಅವರ ಪ್ರಕರಣದ ಮುಕ್ತಾಯದ ನಂತರ ಸಮಸ್ಯೆ ಉಲ್ಬಣಗೊಂಡಿತು. ಈ ವೇಳೆ ವಕೀಲರು ವಾದ ಮಾಡಿದ ರೀತಿ ಬಗ್ಗೆ ನ್ಯಾಯಮೂರ್ತಿ ರಾಜೇಶ್ ಕುಮಾರ್ ಅಸಮಾಧಾನದಿಂದ ಏನೋ ಕಾಮೆಂಟ್ ಮಾಡಿದ್ದಾರೆ. ಆಗ ತಿವಾರಿ ಸಿಟ್ಟಿಗೆದ್ದಿದ್ದು ‘ನಾನು ನನ್ನದೇ ರೀತಿಯಲ್ಲಿ ವಾದ ಮಾಡುತ್ತೇನೆ. ನೀವು ಹೇಳುವ ರೀತಿಯಲ್ಲಲ್ಲ…. ನೀವು ನಿಮ್ಮ ಮಿತಿ ದಾಟಿ ಹೋಗಬೇಡಿ. ಈ ದೇಶ ಹೊತ್ತಿ ಉರಿಯುತ್ತಿದೆ, ನ್ಯಾಯಾಂಗದ ಜೊತೆಗೆ. ಯಾವುದೇ ವಕೀಲರನ್ನು ನೀವು ಅವಮಾನಿಸಬೇಡಿ. ನಾನು 40 ವರ್ಷದಿಂದ ವಕೀಲಿಕೆ ಮಾಡುತ್ತಿದ್ದೇನೆಎಂದು ಮಹೇಶ್ ತಿವಾರಿ ಹೇಳಿದ್ದಾರೆ. ಈ ವೇಳೆ ಸಹ-ವಕೀಲರು ತಿವಾರಿಯನ್ನು ಸಮಾಧಾನಗೊಳಿಸಿದರು. ಈ ಘಟನೆಯಿಂದ ನ್ಯಾಯಾಧೀಶರಾದ ರಾಜೇಶ್ ಕುಮಾರ್ ಮತ್ತಷ್ಟು ಅಸಮಾಧಾನಗೊಂಡಂತಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಮುಖ್ಯ ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್, ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್, ನ್ಯಾಯಮೂರ್ತಿ ರೊಂಗೋನ್ ಮುಖ್ಯೋಪಾಧ್ಯಾಯ, ನ್ಯಾಯಮೂರ್ತಿ ಆನಂದ ಸೇನ್ ಮತ್ತು ನ್ಯಾಯಮೂರ್ತಿ ರಾಜೇಶ್ ಶಂಕರ್ ಅವರನ್ನೊಳಗೊಂಡ ಪೂರ್ಣ ಪೀಠವು ಈ ವಿಷಯವನ್ನು ಪರಿಶೀಲಿಸಲು ಸಭೆ ನಡೆಸಿದೆ. ವಿಚಾರಣೆಯ ನಂತರ, ನ್ಯಾಯಾಲಯ ವಕೀಲ ತಿವಾರಿ ಅವರಿಗೆ ಮೂರು ವಾರಗಳಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ. ವಕೀಲ ಮಹೇಶ್ ತಿವಾರಿಗೆ ನೋಟೀಸ್ ಕೊಡಲಾಗಿದ್ದು, ಮೂರು ವಾರಗಳೊಳಗೆ ಉತ್ತರಿಸುವಂತೆ ಆದೇಶಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
