ಧರ್ಮ, ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್, ಸರ್ಕಾರಿ ಜಾಗ ಅತಿಕ್ರಮಣ: ಖಡಕ್ ಎಚ್ಚರಿಕೆ ಕೊಟ್ಟ ಹೈಕೋರ್ಟ್
ಬೆಂಗಳೂರು: ದೇವರು, ಧರ್ಮದ ಹೆಸರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿದ್ದವರಿಗೆ ಕರ್ನಾಟಕ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ಧರ್ಮ ಮತ್ತು ದೇವರ ಹೆಸರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಲು, ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಚಾಟಿ ಬೀಸಿದೆ.
ಕೋಲಾರ ಜಿಲ್ಲೆ ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ಎರಡೂ ಅರ್ಜಿದಾರ ಸಂಸ್ಥೆಗಳು ನಿರ್ವಹಣೆ ಮಾಡಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಈ ಜಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಸಮುದಾಯದ ದೇಣಿಗೆಗಳಿಂದ ಮಳಿಗೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ನಡುವೆ, ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದರಿಂದ ಗರಂ ಆದ ನ್ಯಾಯಪೀಠವು, ಸರಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ? ಮಳಿಗೆಗಳನ್ನು ಕಟ್ಟಿ ಅವುಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡುತ್ತಿರುವುದು ಯಾವ ಆಧಾರದಲ್ಲಿ ಮತ್ತು ಯಾವ ಉದ್ದೇಶಕ್ಕೆ? ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಅಲ್ಲದೆ ಮತ್ತೇನಲ್ಲ. ಇದಕ್ಕೆ ಅವಕಾಶ ನೀಡಲಾಗದು,” ಎಂದು ಕಿಡಿಕಾರಿತು.
ಅಲ್ಲದೆ, ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದಾಗ, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. ‘ರಾಮ್-ರಹೀಮ್’ ಸೇರಿ ಬಂದಿರುವುದೇ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ,” ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತು.
ಜಾಗ ಮಂಜೂರು ಪ್ರಸ್ತಾವನೆಯು ಜಿಲ್ಲಾಧಿಕಾರಿ ಮುಂದಿದ್ದರೆ, ಅವರ ಬಳಿ ಹೋಗಿ. ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ಜಾಗ ಸರಕಾರಕ್ಕೆ ಸೇರಿದ್ದಾಗಿದೆ. ಸರಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು,” ಎಂದು ನ್ಯಾಯಪೀಠ ಹೇಳಿತು.
ಸರಕಾರಿ ಜಾಗವನ್ನು ಖಾಸಗಿಯವರು ಬಳಕೆ ಮಾಡುತ್ತಿದ್ದರೂ ಇಷ್ಟರವವರೆಗೆ ಸುಮ್ಮನೆ ಇದ್ದದ್ದು ಏಕೆ,” ಎಂದು ನ್ಯಾಯಪೀಠ ಇದೇ ವೇಳೆ ಸರಕಾರಿ ವಕೀಲರನ್ನು ಪ್ರಶ್ನಿಸಿತು. ಅರ್ಜಿ ಸಂಬಂಧ ರಾಜ್ಯ ಸರಕಾರ, ಕೋಲಾರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ಗೆ ನೋಟಿಸ್ ಜಾರಿಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
