ಮಹಾರಾಷ್ಟ್ರ ಭೇಟಿ ವೇಳೆ ಶಿಷ್ಟಾಚಾರ ಲೋಪ: ಸರ್ಕಾರದ ವಿರುದ್ದ ಅಎI ಬಿ.ಆರ್ ಗವಾಯಿ ಬಹಿರಂಗ ಅಸಮಾಧಾನ
ಮುಂಬೈ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದ್ದಕ್ಕೆ ಸಿಜೆಐ ಬಿ.ಆರ್. ಗವಾಯಿ ಅವರು, ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿಗೆ ಶಿಷ್ಟಾಚಾರದ ಉಲ್ಲಂಘನೆ ಆದ ಬಗ್ಗೆ ವರದಿಯಾಗಿದ್ದು, ಬಿ.ಆರ್.ಗವಾಯಿ ಮಹಾ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗವಾಯಿ ನೇರವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಅಥವಾ ಕನಿಷ್ಟ ನಗರ ಪೊಲೀಸ್ ಕಮಿಷನರ್ ಕೂಡ ತಮ್ಮನ್ನು ಸ್ವಾಗತಿಸಲು ಬಂದಿಲ್ಲ ಎಂದು ತಮ್ಮ ವಿಚಾರದಲ್ಲಿ ನಡೆದ ಶಿಷ್ಟಾಚಾರದ ಉಲ್ಲಂಘನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಅಥವಾ ನಗರ ಪೊಲೀಸ್ ಆಯುಕ್ತರು ತಮ್ಮನ್ನು ಸ್ವಾಗತಿಸಲು ಬರದಿರುವುದನ್ನು ಎತ್ತಿ ತೋರಿಸಿದರು. ಸಂವಿಧಾನವೇ ನಮಗೆ ಶ್ರೇಷ್ಠವಾಗಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಮೂರು ಸ್ತಂಭಗಳು. ಇವು ಎಲ್ಲವೂ ಸಮಾನವಾಗಿದೆ. ಈ ಮೂರು ಸ್ತಂಬಗಳು ಪರಸ್ಪರ ಗೌರವ ತೋರಿಸಬೇಕು ಮತ್ತು ಪರಸ್ಪರ ಗೌರವ ನೀಡಬೇಕು ಎಂದು ಗವಾಯಿ ಒತ್ತಿ ಹೇಳಿದರು.
“ಮಹಾರಾಷ್ಟ್ರದವರಾದ ಸಿಜೆಐ ಮೊದಲ ಬಾರಿಗೆ ಬಂದಾಗ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಅಥವಾ ಮುಂಬೈ ಪೊಲೀಸ್ ಆಯುಕ್ತರು ಅಲ್ಲಿಗೆ ಬರಲು ಬಯಸದಿದ್ದರೆ, ಅದು ಸರಿಯೇ ಅಥವಾ ತಪ್ಪು ಎಂಬುದು ಅವರಿಗೆ ಬಿಟ್ಟಿದ್ದು” ಎಂದು ಸಿಜೆಐ ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಷ್ಟಾಚಾರದ ನೀಡುವ ವಿಚಾರದ ಬಗ್ಗೆ ಹೇಳಿದ ಗವಾಯಿ, ಇದು ಗೌರವದ ಪ್ರಶ್ನೆಯಾಗಿದೆ. ಶಿಷ್ಟಾಚಾರವನ್ನು ಪಾಲಿಸುವಂತೆ ನಾನು ಅವರನ್ನು ಖಂಡಿತ ಒತ್ತಾಯಿಸುವುದಿಲ್ಲ. ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಸಹ ನನಗೆ ಅನಿಸುತ್ತಿಲ್ಲ. ಆದರೆ ಜನರಿಗೆ ಈ ಬಗ್ಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಸಿಜೆಐ ಮಾರ್ಮಿಕವಾಗಿ ಟೀಕಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
