19/05/2025

Law Guide Kannada

Online Guide

ಶೀಘ್ರದಲ್ಲೇ ‘ಸಂಧ್ಯಾ ನ್ಯಾಯಾಲಯ’ ಆರಂಭ : ಮಾಹಿತಿ, ಅಭಿಪ್ರಾಯ ಕೇಳಿದ ಹೈಕೋರ್ಟ್

ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದು ಇದೀಗ ರಾಜ್ಯದಲ್ಲಿ ಶೀಘ್ರದಲ್ಲೇ “ಸಂಧ್ಯಾ ನ್ಯಾಯಾಲಯಗಳು’’ ತಲೆ ಎತ್ತುವ ಸಾಧ್ಯತೆ ಇದೆ.

ಹೌದು, ಸಣ್ಣ ಪುಟ್ಟ ಕ್ರಿಮಿನಲ್ ಕೇಸ್ ಗಳು, ಶೀಘ್ರದಲ್ಲೇ ಬಗೆಹರಿಸಬಹುದಾದ ಆಸ್ತಿ ವಿವಾದಗಳು, ಚೆಕ್ ಬೌನ್ಸ್ ಕೇಸ್ಗಳು ಹಾಗೂ ಇತರ ಲಘು ಪ್ರಮಾಣದ ಶಿಕ್ಷೆಯನ್ನು ಒಳಗೊಂಡ ಕ್ರಿಮಿನಲ್ ಕೇಸ್ ಗಳ ವಿಚಾರಣೆ ನಡೆಸುವ ಉದ್ದೇಶದಿಂದ ಸಂಜೆ ನ್ಯಾಯಾಲಯಗಳನ್ನು ಕಾರ್ಯಾರಂಭ ಮಾಡುವ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಸಂಬಂಧ ಡಿಸ್ಟ್ರಿಕ್ಟ್ ಜಡ್ಜ್ ಗಳಿಂದ ಮಾಹಿತಿ, ಅಭಿಪ್ರಾಯವನ್ನೂ ರಾಜ್ಯ ಹೈಕೋರ್ಟ್ ಕೇಳಿದೆ.

ರಾಜ್ಯದ ಎಲ್ಲ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳ ನ್ಯಾಯಾಧೀಶರುಗಳಿಗೆ ಸುತ್ತೋಲೆಯೊಂದನ್ನು ಹೈಕೋರ್ಟ್ ಹೊರಡಿಸಿದ್ದು, ಈ ಸುತ್ತೋಲೆಯಲ್ಲಿ ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಸಂಜೆ ನ್ಯಾಯಾಲಯಗಳ ಸಾಧ್ಯತೆ ಬಗ್ಗೆ ವಿವರವನ್ನು ತಮ್ಮ ಅಭಿಪ್ರಾಯದ ಜೊತೆಗೆ ನೀಡುವಂತೆ ಸೂಚಿಸಲಾಗಿದೆ.

ದೇಶದಲ್ಲಿ ಒಟ್ಟು 785 ಸಂಧ್ಯಾ ನ್ಯಾಯಾಲಯಗಳನ್ನು ತೆರೆಯಲು ನ್ಯಾಯಾಂಗ ವ್ಯವಸ್ಥೆಯು ಸಿದ್ಧತೆ ನಡೆಸಿದೆ. ಈ ಸಂಧ್ಯಾ ನ್ಯಾಯಾಲಯಗಳು ಸಂಜೆ 5ರಿಂದ 9 ಗಂಟೆ ವರೆಗೆ ಕಾರ್ಯಾಚರಿಸುವ ಯೋಚನೆ ಇದೆ ಎನ್ನಲಾಗಿದೆ. ಈ ಸಂಧ್ಯಾ ನ್ಯಾಯಾಲಯಗಳಲ್ಲಿ ಸಣ್ಣ ಪುಟ್ಟ ಕ್ರಿಮಿನಲ್ ಕೇಸ್ಗಳು, ಶೀಘ್ರದಲ್ಲೇ ಬಗೆಹರಿಸಬಹುದಾದ ಆಸ್ತಿ ವಿವಾದಗಳು, ಚೆಕ್ ಬೌನ್ಸ್ ಕೇಸ್ಗಳು ಹಾಗೂ ಇತರ ಲಘು ಪ್ರಮಾಣದ ಶಿಕ್ಷೆಯನ್ನು ಒಳಗೊಂಡ ಕ್ರಿಮಿನಲ್ ಕೇಸ್ ಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸಂಧ್ಯಾ ನ್ಯಾಯಾಲಯಗಳಲ್ಲಿ ನ್ಯಾಯತೀರ್ಮಾನ ಮಾಡಲು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸೇವೆಯನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ವಿಚಾರಣಾ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವ ಉದ್ದೇಶದಿಂದ ಈ ಮಹತ್ವಾಕಾಂಕ್ಷೆಯ ಸಂಧ್ಯಾ ನ್ಯಾಯಾಲಯಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.