07/03/2026

Law Guide Kannada

Online Guide

ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶೀಘ್ರ ನ್ಯಾಯ: ಮಹತ್ವದ ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶಕ್ಕಾಗಿ ರೂಪಿಸಲಾಗಿರುವ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024 (the Code of Civil Procedure (Karnataka Amendment) Act, 2024)ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದದ್ದು ಈ ಮೂಲಕ ಸಿವಿಲ್ ಪ್ರಕರಣಗಳಿಗೆ 2 ವರ್ಷದೊಳಗೆ ಮುಕ್ತಿ ಸಿಗಲಿದೆ.

ಈ ಬಗ್ಗೆ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ದಶಕಗಟ್ಟಲೇ ಕಾಯುವ/ವಿಳಂಬಕ್ಕೆ ಮುಕ್ತಿ ನೀಡಲು ಕರ್ನಾಟಕ ಯಶಸ್ವಿಯಾದ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಸರ್ಕಾರ ಕ್ರಾಂತಿಕಾರಕ ತಿದ್ದುಪಡಿಯನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಮಾಡಿದೆ. ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಈ ಐತಿಹಾಸಿಕ ತಿದ್ದುಪಡಿ ರಾಷ್ಟ್ರದಲ್ಲಿಯೇ ಮೊದಲು. ತಕ್ಷಣದಿಂದ ಈ ತಿದ್ದುಪಡಿ ಜಾರಿಗೆ ಬರಲಿದೆ. ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆಗಾಗಿ ಕೇಂದ್ರದ ಕಾನೂನಾದ ಸಿವಿಲ್ ಪ್ರಕ್ರಿಯಾ ಸಂಹಿತೆಗೆ(ಸಿಪಿಸಿ)ಗೆ ಕರ್ನಾಟಕ ತಿದ್ದುಪಡಿಗಳನ್ನು ಮಾಡಿತ್ತು. ಈ ತಿದ್ದುಪಡಿಗಳು ರಾಷ್ಟ್ರದ ಕಾನೂನಿನಲ್ಲಿ ರಾಜ್ಯವ್ಯಾಪಿ ಜಾರಿಯಲ್ಲಿರುತ್ತವೆ. ಶಾಸಕಾಂಗ ಮಾಡಿದ ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಿಪಿಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಮಾಡಿತ್ತು. ರಾಜ್ಯದಲ್ಲಿ ನಿರ್ದಿಷ್ಟ ಸಮಯ ಪಾಲನೆಯೊಂದಿಗೆ ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡು, ಶೀಘ್ರ ನ್ಯಾಯದಾನಕ್ಕೆ ಈ ತಿದ್ದುಪಡಿಗಳು ಅವಕಾಶ ಕಲ್ಪಿಸಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಯಾಲಯಗಳ ಕಲಾಪಗಳಲ್ಲಿ ವಿಳಂಬ ನಿರಾಕರಿಸುವ, ಚರಿತ್ರಾರ್ಹ ಸುಧಾರಣೆಗೆ ಶಾಸನಾತ್ಮಕ ಅಂಕುಶ ಹೊಂದಿರುವ ಈ ತಿದ್ದುಪಡಿ ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳಲ್ಲಿ ಯಾವುದೇ ಸಿವಿಲ್ ಪ್ರಕರಣ ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣುವುದಕ್ಕೆ ಸುನಿಶ್ಚಿತಗೊಳಿಸುವ ಶಾಸನ ಜಾರಿಗೆ ಬಂದಿದೆ. ಈ ಪೂರ್ವಗಾಮಿ ಪ್ರಗತಿಯ ಜೊತೆ-ಜೊತೆಗೆ ಈ ಕಾನೂನು ನ್ಯಾಯಾಲಯಗಳಲ್ಲಿ ಆಗುವ ವಿಳಂಬಕ್ಕೆ ಇತಿಶ್ರೀ ಹಾಡಲಿದೆ. ಇನ್ನು ಮುಂದೆ ನ್ಯಾಯಾಲಯಗಳಲ್ಲಿ, ವಿಳಂಬವಿಲ್ಲದೇ ಪ್ರಕರಣಗಳು ಇತ್ಯರ್ಥವಾಗಲು ಶಾಸನ ಮಾಡಲಾಗಿದೆ ಎಂದರು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ದಿನದಂದು ಅಥವಾ ಮೊದಲ ವಿಚಾರಣೆಯ ದಿನದಂದು ಅಂತಿಮ ತೀರ್ಪು / ಆದೇಶದ ದಿನಾಂಕ ನಿರ್ಣಯವಾಗುವ ಅತ್ಯಂತ ಪರಿಣಾಮಕಾರಿ ಮಹತ್ವದ ಶ್ರೇಷ್ಠವಾದ ನ್ಯಾಯಾಂಗದ ಕಾರ್ಯ ನಿರ್ವಹಣೆಗೆ ಈ ತಿದ್ದುಪಡಿ ಇಂಬು ನೀಡಲಿದೆ ಎಂದು ತಿಳಿಸಿದರು.

ನಮ್ಮ ಶಾಸಕಾಂಗ ಮಾಡಿರುವ ಈ ತಿದ್ದುಪಡಿಯ ಅನ್ವಯ, ಪ್ರತಿಯೊಂದು ಸಿವಿಲ್ ಪ್ರಕರಣಗಳನ್ನು ಕಕ್ಷಿದಾರರ ನಡುವೆ ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯ ಪ್ರಯತ್ನ ಮಾಡಬೇಕು. ಎರಡು ತಿಂಗಳ ಒಳಗಾಗಿ ರಾಜಿ ಸಂಧಾನದ ಪ್ರಯತ್ನ ತಾರ್ಕಿಕ ಅಂತ್ಯ ಕಾಣಬೇಕು. ಅದು ಸಾಧ್ಯವಾಗದೇ ಇದ್ದಾಗ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಶಾಸನಾತ್ಮಕ ಅವಕಾಶ ದೊರೆತಿರುವುದು ಕಕ್ಷಿದಾರನ ಪಾಲಿಗೆ ತೆರೆದ ಭಾಗ್ಯದ ಬಾಗಿಲು ಎಂದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ 2024ರ ಡಿ. 17ರಂದು ವಿಧಾನ ಸಭೆಯಲ್ಲಿ, ಡಿ. 18ರಂದು ವಿಧಾನ ಪರಿಷತ್ತಿನಲ್ಲಿ ಈ ಕಾನೂನು ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ಸಂವಿಧಾನದ ಅನುಚ್ಛೇದ 200 ಮತ್ತು 254 ರಡಿಯಲ್ಲಿ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯ್ದಿರಿಸಿದ್ದರು.

ಈ ಕಾನೂನಿಗೆ ರಾಷ್ಟ್ರಪತಿಯವರು ಮೇ 19 ರಂದು ತಮ್ಮ ಅಂಕಿತ ಹಾಕಿದ್ದಾರೆ. ಲಿಖಿತ ಹೇಳಿಕೆ, ಸಾಕ್ಷ್ಯ ಸಂಗ್ರಹ ಎಲ್ಲದಕ್ಕೂ ಕಾಲಮಿತಿ ನಿಗದಿಪಡಿಸಲು ಶಾಸನ ಅವಕಾಶ ಕಲ್ಪಿಸಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳೊಳಗಾಗಿ ಕೇವಲ 3 ಮುಂದೂಡಿಕೆ ಅಥವಾ 3 ದಿನಾಂಕಗಳ ಅವಕಾಶ ಮಾತ್ರ ಕಲ್ಪಿಸಲಾಗುವುದು. ಯಾವುದೇ ಹಂತದಲ್ಲಿ ಅರ್ಜಿದಾರ-ಪ್ರತಿವಾದಿ ಈ ಅವಕಾಶದಲ್ಲಿ ಸಲ್ಲಿಸದಿದ್ದರೆ, ಅಂಥವರ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲು ಅವಕಾಶ ನೀಡಲಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.