19/05/2025

Law Guide Kannada

Online Guide

‘ನಕಲಿ’ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖ ಹಿನ್ನೆಲೆ: ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಹೈಕೋರ್ಟ್

ಬೆಂಗಳೂರು: ಸಿವಿಲ್ ಪ್ರಕರಣವೊಂದರ ಅರ್ಜಿಯ ವಿಚಾರಣೆ ವೇಳೆ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಅಥವಾ ಯಾವುದೇ ಇತರ ನ್ಯಾಯಾಲಯವು ಎಂದಿಗೂ ನೀಡದ ಎರಡು ತೀರ್ಪುಗಳನ್ನು ಉಲ್ಲೇಖಿಸಿದ ಹಿನ್ನೆಲೆ ಆ ನ್ಯಾಯಾಧೀಶರ ವಿರುದ್ದ ಕ್ರಮಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಇತ್ಯರ್ಥಪಡಿಸುವಾಗ ಸುಪ್ರೀಂ ಕೋರ್ಟ್ನ ಅಸ್ತಿತ್ವದಲ್ಲಿಲ್ಲದ ತೀರ್ಪುಗಳನ್ನು ಉಲ್ಲೇಖಿಸಿದ್ದಕ್ಕಾಗಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶಿಸಿದೆ. ನ್ಯಾಯಾಧೀಶರ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಆರ್ ದೇವದಾಸ್ ಅವರು, ನಕಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದ ನಗರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಅಥವಾ ಯಾವುದೇ ಇತರ ನ್ಯಾಯಾಲಯವು ಎಂದಿಗೂ ನೀಡದ ಎರಡು ತೀರ್ಪುಗಳನ್ನು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಉಲ್ಲೇಖಿಸಿದ್ದು, ನ್ಯಾಯಾಧೀಶರ ಈ ಕೃತ್ಯಕ್ಕೆ ಕಾನೂನಿನ ಪ್ರಕಾರ ಹೆಚ್ಚಿನ ತನಿಖೆ ಮತ್ತು ಸೂಕ್ತ ಕ್ರಮದ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಾಣಿಜ್ಯ ವಿವಾದದಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸುವ ಪರಿಷ್ಕರಣಾ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿತ್ತು.

ಇನ್ನು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನವದಗಿ, ಕೆಳ ನ್ಯಾಯಾಲಯವು ಅಸ್ತಿತ್ವದಲ್ಲಿಲ್ಲದ ತೀರ್ಪುಗಳ ಉಲ್ಲೇಖಗಳನ್ನು ಆಧರಿಸಿ ಮಾತ್ರ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ನ ವೆಬ್ಸೈಟ್ ಅಥವಾ ಯಾವುದೇ ಇತರ ಕಾನೂನು ಡೇಟಾ ಬೇಸ್ ನಲ್ಲಿ ಅವುಗಳ ಯಾವುದೇ ಅಧಿಕೃತ ದಾಖಲೆಗಳು ಕಂಡುಬರದ ಕಾರಣ, ಉಲ್ಲೇಖಿಸಲಾದ ತೀರ್ಪುಗಳನ್ನು ‘ಮೋಸದಿಂದ ತಯಾರಿಸಲಾಗಿದೆ’ ಎಂದು ನವದಗಿ ಹೈಕೋರ್ಟ್ಗೆ ತಿಳಿಸಿದರು. ChatGPT ಯಂತಹ ಕೃತಕ ಬುದ್ಧಿಮತ್ತೆ ಸಾಧನಗಳು ಕೆಲವೊಮ್ಮೆ ‘ಕಾಲ್ಪನಿಕ ಪ್ರಕರಣ ಕಾನೂನುಗಳನ್ನು’ ಉತ್ಪಾದಿಸುತ್ತವೆ. ಪ್ರಸ್ತುತ ಪ್ರಕರಣದಲ್ಲಿ ಇದು ಒಂದು ಸಾಧ್ಯತೆಯಾಗಿರಬಹುದು ಎಂದು ಅವರು ಸೂಚಿಸಿದರು.

ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಈ ಆದೇಶದ ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಮುಖ್ಯ ನ್ಯಾಯಾಧೀಶರ ಮುಂದೆ ಇಡಬೇಕು ಎಂದು ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.