ಪತಿ ವಿರುದ್ದ ಸುಳ್ಳು ಕೇಸ್, ಮಾನಸಿಕ ಹಿಂಸೆ : ಪತ್ನಿಗೆ ಬಿತ್ತು 1.8 ಕೋಟಿ ರೂ. ದಂಡ
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಮಹಿಳಾ ಪರ ಕಾನೂನುಗಳ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ತನ್ನ ಪತಿಯ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸಿ ನಿರಂತರ ಸುಳ್ಳು ಪ್ರಕರಣಗಳನ್ನ ದಾಖಲಿಸಿದ್ದ ಪತ್ನಿಗೆ ಚಳಿ ಬಿಡಿಸಿದ ನ್ಯಾಯಾಲಯ 1.8 ಕೋಟಿ ರೂ. ದಂಡ ವಿಧಿಸಿ ಆದೇಶಿಸಿದೆ.
ಉತ್ತರ ಪ್ರದೇಶದ ಗುರುಗ್ರಾಮದ ನ್ಯಾಯಾಧೀಶರಾದ ಮನೀಶ್ ಕುಮಾರ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಪತಿಯ ವಿರುದ್ಧ ಸುಳ್ಳು ಆರೋಪ ಮಾಡಿ ಅನೇಕ ಪ್ರಕರಣಗಳನ್ನ ದಾಖಲಿಸಿ ಮಹಿಳಾ ಪರ ಕಾನೂನುಗಳ ದುರ್ಬಳಕೆ ಮಾಡಿರುವ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹಾಗೆಯೇ 16 ವರ್ಷಗಳ ಕಾಲ ಪತಿಯನ್ನು ಕೋರ್ಟ್-ಕಚೇರಿ ಸುತ್ತುವಂತೆ ಮಾಡಿ ಸತಾಯಿಸಿದ ಪತ್ನಿಗೆ 1.8 ಕೋಟಿ ದಂಡ ವಿಧಿಸಿದೆ.
ತನ್ನ ಮಾಜಿ ಪತ್ನಿ ಇಂಗ್ಲೆಂಡ್ ಪ್ರಜೆಯೊಬ್ಬರು ತನ್ನ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಾರಣವಿಲ್ಲದೆ ತನ್ನನ್ನು ಕೇಸ್ ನಲ್ಲಿ ಪತ್ನಿ ಸಿಲುಕಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಅವರು ಸಾಕ್ಷಿ ಸಹಿತ ದಾಖಲೆ ಒದಗಿಸಿದ್ದರು. ಅಲ್ಲದೆ ಈ ರೀತಿ ಮಾನಸಿಕವಾಗಿ ಹಿಂಸೆ ನೀಡಿದಾಕೆ ತನಗೆ 1.80 ಕೋಟಿ ಪರಿಹಾರ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ಕೌರ್ಯ), 405 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಪತಿಯನ್ನು ಬಂಧಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪತಿ ವಾದಿಸಿದ್ದರು. 2016 ರಲ್ಲಿ ಕೆಳ ನ್ಯಾಯಾಲಯ ಪತಿಯನ್ನು ಆರೋಪಮುಕ್ತಗೊಳಿಸಿತ್ತು. ಇದರಿಂದ ತೃಪ್ತರಾಗದ ಪತ್ನಿ 2018 ರಲ್ಲಿ ಸೆಷನ್ಸ್ ಕೋರ್ಟ್ಗೆ ಮೆಟ್ಟಿಲೇರಿದ್ದಳು. ಸೆಷನ್ಸ್ ನ್ಯಾಯಾಲಯವೂ ಸಹ ಮೇಲ್ಮನವಿಯನ್ನು ತಿರಸ್ಕರಿಸಿ ಆರೋಪಿ ಪರ ಆದೇಶವನ್ನು ಎತ್ತಿಹಿಡಿದಿತ್ತು.
ನಂತರ ಸುದೀರ್ಘ ಅವಧಿಯವರೆಗೆ ತಮಗೆ ಕಿರುಕುಳ ನೀಡಿದ ಮಾಜಿ ಪತ್ನಿಯನ್ನು ಸುಮ್ಮನೆ ಬಿಡಬಾರದು ಎಂದು ಪತಿಯು 6 ವರ್ಷಗಳ ಕಾನೂನು ಹೋರಾಟದಲ್ಲಿ ಆಗಿರುವ ಆರ್ಥಿಕ ನಷ್ಟ ಮತ್ತು ವೈಯಕ್ತಿಕ ನೋವನ್ನು ಉಲ್ಲೇಖಿಸಿ ದುರುದ್ದೇಶಪೂರಿತ ಕೇಸ್ ದಾಖಲಿಸಿದ್ದ ಮಾಜಿ ಪತ್ನಿಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಕೋರಿದರು. ಇದನ್ನು ಕೋರ್ಟ್ ಪರಿಗಣಿಸಿ. ಪತ್ನಿಗೆ 1.8 ಕೋಟಿ ರೂ. ದಂಡ ವಿಧಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
