19/05/2025

Law Guide Kannada

Online Guide

ಅಮಾಯಕನ ಮೇಲೆ ಸುಳ್ಳು ಜಾತಿ ನಿಂದನೆ, ಪೋಕ್ಸೊ ಕೇಸ್: ಸಂತ್ರಸ್ತೆ ವಿರುದ್ದ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಮಂಗಳೂರು: ಅಮಾಯಕ ಯುವಕನ ವಿರುದ್ದ ಸುಳ್ಳು ಜಾತಿ ನಿಂದನೆ ಮತ್ತು ಪೋಕ್ಸೋ ಪ್ರಕರಣ ದಾಖಲಿಸಿ ನಂತರ ಪರಿಹಾರವನ್ನೂ ಪಡೆದಿದ್ದ ಸಂತ್ರಸ್ತೆಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಂಡ ಹಾಕಿ ತೀರ್ಪು ನೀಡಿದೆ.

ತನ್ನ ಮೇಲಿನ ಸಾಲದ ವಸೂಲಿಯಿಂದ ತಪ್ಪಿಸಿಕೊಳ್ಳಲು ಮಂಗಳೂರಿನ ಯುವಕನ ಮೇಲೆ ಬಾಲಕಿಯ ತಾಯಿ ಸುಳ್ಳು ಜಾತಿ ನಿಂದನೆ ಮತ್ತು ಪೋಕೋ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ ಫಾಸ್ಟ್ ಟ್ರ್ಯಾಕ್)ದ ನ್ಯಾಯಾಧೀಶರಾದ ವಿನಯ್ ದೇವರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಕಾನೂನು ದುರುಪಯೋಗ ಮಾಡಿಕೊಂಡು ಅಮಾಯಕರು ಜೈಲು ಕಂಬಿ ಎಣಿಸುವಂತೆ ಮಾಡಿದ್ದ ಫಿರ್ಯಾದಿಯವರು ಮತ್ತು ಸಂತ್ರಸ್ತೆಗೆ ಸರ್ಕಾರದಿಂದ ನೀಡಲಾದ ಪರಿಹಾರದ ಮೊತ್ತವನ್ನು ವಾಪಸ್ ಕೊಡಬೇಕು. ಒಂದು ವೇಳೆ, ಇದಕ್ಕೆ ವಿಫಲವಾದಲ್ಲಿ ಸರ್ಕಾರವೇ ಫಿರ್ಯಾದಿಯಿಂದ ಈ ಮೊತ್ತವನ್ನು ವಸೂಲಿ ಮಾಡುವಂತೆ ನ್ಯಾಯಪೀಠ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ಏನಿದು ಪ್ರಕರಣ..
ಬಂಟ್ವಾಳ ತಾಲ್ಲೂಕಿನ ತೇಜಸ್ ಎಂಬ ಯುವಕನ ವಿರುದ್ದವೇ ಸಂತ್ರಸ್ತೆ ತಾಯಿ ಸುಳ್ಳು ಜಾತಿ ನಿಂದನೆ ಮತ್ತು ಪೋಕೋ ಪ್ರಕರಣ ದಾಖಲಿಸಿದ್ದರು. ತೇಜಸ್ 2024 ಮಾರ್ಚ್ 21 ರಂದು ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ವಾಗ್ವಾದ ಮಾಡಿದ್ದಲ್ಲದೆ ತನ್ನ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಹಾಗೂ ತಮ್ಮ ಜಾತಿ ನಿಂದನೆ ಮಾಡಿದ ಹಾಗೂ ಆತ ತನ್ನ ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಕ್ಷಿಪ್ರಗತಿಯ ಪೋಕ್ಸೋ) ನ್ಯಾಯಾಲಯ ನಡೆಸಿತ್ತು. ವಿಚಾರಣೆಯ ವೇಳೆ ಬಾಲಕಿಯ ತಾಯಿ ಆರೋಪಿ ತೇಜಸ್ ನಿಂದ ಸಾಲ ಮತ್ತು ಚಿನ್ನ ಸಹಿತ 5.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಪಡೆದುಕೊಂಡಿದ್ದರು ಎಂಬುದನ್ನು ಒಪ್ಪಿಕೊಂಡಿದ್ದರು. ತೇಜಸ್ ಈ ಬಗ್ಗೆ ಆಗಾಗ ತಾನು ನೀಡಿದ ಸಾಲ ವಾಪಸ್ ಕೇಳಿದ್ದ. ಇದರಿಂದ ತಪ್ಪಿಸಿಕೊಳ್ಳಲು ಫಿರ್ಯಾದಿ ತೇಜಸ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆಯ ಆರೋಪ ಮಾಡಿ ಸುಳ್ಳು ದೂರು ದಾಖಲಿಸಿದ್ದರು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರದ ಮೊತ್ತವನ್ನು ಪಡೆದುಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸುವ ವೇಳೆ ಬಾಲಕಿಯ ತಾಯಿ ಸಾಲ ಪಡೆದಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಯುವಕನ ಮೇಲೆ ಸುಳ್ಳು ದೂರು ಹಾಕಿರುವುದನ್ನು ತಪ್ಪೊಪ್ಪಿಕೊಂಡಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಬಾಲಕಿಯ ಕುಟುಂಬಕ್ಕೆ ನೀಡಿದ ಪರಿಹಾರದ ಮೊತ್ತವನ್ನು ವಾಪಸ್ ನೀಡುವಂತೆ ಆದೇಶ ನೀಡಿದ್ದಾರೆ ಪರಿಹಾರದ ಮೊತ್ತ ವಾಪಸ್ ಕೊಡದಿದ್ದರೆ ಆಸ್ತಿಯನ್ನ ಜಪ್ತಿ ಮಾಡಿ ಹಣ ವಸೂಲಿಗೆ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.