07/03/2026

Law Guide Kannada

Online Guide

ಅಗತ್ಯ ಮತ್ತು ಸಕಾರಣವಿಲ್ಲದೆ ಆಓಂ ಪರೀಕ್ಷೆಗೆ ಒತ್ತಾಯ ಸರಿಯಲ್ಲ- ಹೈಕೋರ್ಟ್

ಬೆಂಗಳೂರು: ‘ಸಕಾರಣ ವಿಲ್ಲದೆಮತ್ತು ಅಗತ್ಯ ಇಲ್ಲದೇ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ಸಲ್ಲದು. ಇದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟುಗಳ ಅಡಿಯಲ್ಲಿ ದಂಪತಿಗಳಿಗೆ ಕೊಡಮಾಡಿದ ಗೋಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ’ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ 39 ವರ್ಷದ ಪುರುಷರೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ (ಡಬ್ಲ್ಯು.ಪಿ 20342/2025) ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು ಸದರಿ ತೀರ್ಪಿನ ಸಮಯದಲ್ಲಿ ಮಾಡಲಾಗಿರುವ ಎಲ್ಲ ಅವಲೋಕನಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು. ಅಂತೆಯೇ, ಈ ತೀರ್ಪನ್ನು ಸಂಬಂಧಪಟ್ಟ ನ್ಯಾಯಾಲಯಗಳಿಗೆ ರವಾನಿಸಬೇಕು’ ಎಂದು ರಿಜಿಸ್ಟ್ರಿಗೆ ತಾಕೀತು ಮಾಡಿತು.

ಪ್ರಕರಣದ ಹಿನ್ನೆಲೆ…
ಮೊದಲ ಹೆಂಡತಿಯ ಇಬ್ಬರು ವಯಸ್ಕ ಗಂಡು ಮಕ್ಕಳು ಹಾಗೂ ಎರಡನೇ ಹೆಂಡತಿಯ ವಯಸ್ಕ ಮಗನ ಮಧ್ಯೆ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ ವ್ಯಾಜ್ಯವಿತ್ತು. 2016ರಿಂದ ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿ ಅಸಲು ದಾವೆಯ ವ್ಯಾಜ್ಯ ಮುಂದುವರಿದಿತ್ತು. ವ್ಯಾಜ್ಯದ ಸಮಯದಲ್ಲಿ ಅರ್ಜಿದಾರರನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ಅವರ ಪಿತೃತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ‘ರಿಟ್ ಅರ್ಜಿದಾರರು, ನಮ್ಮ ತಂದೆಗೆ ಜನಿಸಿದ ಮಗನಲ್ಲ. ನಮ್ಮ ತಂದೆಗೆ ಆದಾಗಲೇ ವಾಸೆಕ್ಟಮಿ (ನಸ್ಟಂದಿ) ಅಪರೇಷನ್ ಆಗಿತ್ತು. ಅವರಿಗೆ ಮಕ್ಕಳಾಗುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ಇವರ ಪಿತೃತ್ವದ ಸತ್ಯಾಸತ್ಯತೆ ಅರಿಯಲು ಡಿಎನ್ಎ ಪರೀಕ್ಷೆ ನಡೆಸಲು ಆದೇಶಿಸಬೇಕು’ ಎಂದು ಮೊದಲ ಹೆಂಡತಿಯ ಇಬ್ಬರು ಮಕ್ಕಳು (ಅಸಲು ದಾವೆಯ ವಾದಿಗಳು) ಮನವಿ ಮಾಡಿದ್ದರು.

ಈ ತಕರಾರನ್ನು ಮಾನ್ಯ ಮಾಡಿದ್ದ ಸಿವಿಲ್ ನ್ಯಾಯಾಧೀಶರು, ಸಿವಿಲ್ ಪ್ರಕ್ರಿಯಾ ಸಂಹಿತೆ 1908ರ ನಿಯಮ 26, ನಿಯಮ 10 ಎ ಅಡಿಯಲ್ಲಿ ಡಿಎನ್ಎ ಪರೀಕ್ಷೆಗೆ ಸಮ್ಮತಿ ನೀಡಿ 2025ರ ಏಪ್ರಿಲ್ 5ರಂದು ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿದ್ದ 39 ವರ್ಷದ ಅರ್ಜಿದಾರರು, ‘ವಿಚಾರಣಾ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿಜಯಕೃಷ್ಣ ಭಟ್ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಒಂದು ವೇಳೆ ಡಿಎನ್ಎ ಪರೀಕ್ಷೆ ನಡೆಸಿ ಏನಾದರೂ ವರದಿ ಸಿದ್ದಪಡಿಸಿದ್ದರೆ ಅಂತಹ ವರದಿ ಅಮಾನ್ಯವಾಗಿರುತ್ತದೆ’ ಎಂದು ಹೇಳಿದೆ
‘ಸಂವಿಧಾನದಲ್ಲಿ ನಿಗದಿಪಡಿಸಿದಂತೆ ಪರೀಕ್ಷೆ, ಗೋಪ್ಯತೆಯ ಹಕ್ಕು ಮತ್ತು ಘನತೆಯ ನಡುವೆ ಹೆಣೆದುಕೊಂಡಿರುವ ಸೂಕ್ಷ್ಮ ಸಮತೋಲನವನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಬಾರದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರ ಅಸ್ತಿತ್ವವೇ ಸಾರ್ವಜನಿಕ ನೈತಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಅಥವಾ ಶಾಂತಿಯ ಭದ್ರತೆಯನ್ನು ಹೊಂದಿದೆ. ದಾಂಪತ್ಯ ಅಸ್ತಿತ್ವದಲ್ಲಿರುವಾಗ ಮತ್ತು ಗರ್ಭ ಧರಿಸಿದ 280 ದಿನಗಳ ಮೇಲೆ ಮಗು ಜನಿಸಿದರೆ ಅದು ಆತನೇ ತಂದೆ ಎಂದು ತಿಳಿಯಬೇಕು. ಈ ನಿರ್ಣಾಯಕ ಪುರಾವೆಯನ್ನು ಮೀರಿ ಒಂದು ವೇಳೆ ಮಗುವಿನ ಪಿತೃತ್ತವನ್ನು ಪ್ರಶ್ನಿಸಿದ್ದೇ ಆದರೆ ಅದು 112ರಲ್ಲಿ ಅಡಕವಾಗಿರುವ ತತ್ವಗಳನ್ನು ಮೀರಿದ ಕಾರಣಕ್ಕೆ ಉದ್ಭವಿಸಿದೆ ಎನ್ನುವಂತಿರಬೇಕು. ಇಂತಹ ಮೀರಿದ ಸಂದರ್ಭಗಳಲ್ಲಿ ಮಾತ್ರವೇ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡುವುದು ಸಮ್ಮತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.