07/03/2026

Law Guide Kannada

Online Guide

ವಯೋಮಿತಿ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ – ಹೈಕೋರ್ಟ್ ಆದೇಶ

ಬೆಂಗಳೂರು: ಪತಿ ನಿಧನ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಮಾನವೀಯತೆಯನ್ನು ಪರಿಗಣಿಸಿ ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರ ರಾಮಣ್ಣ ಪತ್ನಿ 45 ವರ್ಷದ ಲಕ್ಕವ್ವಗೆ ಅನುಕಂಪದ ಆಧಾರದ ಮೇರೆಗೆ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇದ್ದ ಪೀಠ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ ಶಿರಾಹಟ್ಟಿ ತಾಲೂಕಿನ ಲಕ್ಕವ್ವ ಎಂಬುವರ ಪತಿ ಸಂಸ್ಥೆಯ ನೌಕರ ರಾಮಣ್ಣ ಎನ್ ಡಬ್ಲ್ಯು ಕೆಆರ್ ಟಿಸಿಗೆ ಉದ್ಯೋಗಿಯಾಗಿದ್ದರು. ಈ ಮಧ್ಯೆ ಅವರು 2021ರಲ್ಲಿ ಮೃತಪಟ್ಟಿದ್ದರು. ಆದರೆ ರಾಮಣ್ಣ ಹಾಗೂ ಲಕ್ಕವ್ವ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಅನುಕಂಪದ ಹುದ್ದೆಯನ್ನು ತನಗೆ ನೀಡಬೇಕೆಂದು ಪತ್ನಿ ಲಕ್ಕವ್ವ ಸಂಸ್ಥೆಗೆ ಮನವಿ ಮಾಡಿದ್ದರು. ಆದರೆ ವಯೋಮಿತಿ ಆಧಾರದ ಮೇಲೆ ಅನುಕಂಪದ ಹುದ್ದೆ ನೀಡಲು ಬರುವುದಿಲ್ಲ ಎಂದು NWKRTC ನಿಗಮದ ಅಧಿಕಾರಿಗಳು ಹೇಳಿ ಅವರನ್ನು ಕಳಿಸಿದ್ದರು. ಅದನ್ನು ಪ್ರಶ್ನಿಸಿ ಲಕ್ಕವ್ವ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅನುಕಂಪದ ಹುದ್ದೆ ಕೋರಿ ಲಕ್ಕವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಕ್ಕಳೂ ಇಲ್ಲದ 45 ವರ್ಷ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ ಎಂದು ಎನ್ ಡಬ್ಲ್ಯು ಕೆಆರ್ ಟಿಸಿಗೆ ನಿರ್ದೇಶಿಸಿದೆ.

ಮಕ್ಕಳಿಲ್ಲದ ಮಹಿಳೆಯಾದ್ದರಿಂದ ಮಾನವೀಯತೆಯಿಂದ ಪರಿಗಣಿಸಿ. ವಯೋಮಿತಿಯ ಕಠಿಣ ಹೇರಿಕೆಯಿಂದ ಅನ್ಯಾಯವಾಗಬಾರದು. ಇಂತಹ ಪ್ರಕರಣಗಳಲ್ಲಿ ಮಾನವೀಯತೆಯ ನೀತಿ ರೂಪಿಸಲು ನ್ಯಾಯಪೀಠ ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.