06/03/2026

Law Guide Kannada

Online Guide

ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಋತುಚಕ್ರದ ರಜೆ ಸೌಲಭ್ಯಕ್ಕೆ ಅಧಿಕೃತ ಆದೇಶ ಪ್ರಕಟ

ಬೆಂಗಳೂರು: ಮಹಿಳಾ ಸರ್ಕಾರಿ ನೌಕರರಿಗೆ  ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಋತುಚಕ್ರದ ರಜಾ ಸೌಲಭ್ಯಕ್ಕೆ ಸಂಬಂಧಿಸಿದಂತೆ ಅಧಿಕೃತ ಸರ್ಕಾರಿ ಆದೇಶವನ್ನು  ಹೊರಡಿಸಿದೆ. 

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ (ಸೇವೆಗಳು-1) ಇದರ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀ ಅಜಯ್ ಎಸ್. ಕೊರಡೆ ಅವರು, ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ಗುತ್ತಿಗೆ/ಹೊರಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವಾರ್ಷಿಕ 12 ದಿನಗಳು ವೇತನ ಸಹಿತ ರಜೆಯ ಸೌಲಭ್ಯವನ್ನು ಓದಲಾದ ಸರ್ಕಾರಿ ಆದೇಶದಲ್ಲಿ ಮಂಜೂರು ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ರಾಜ್ಯ ಮಹಿಳಾ ಸರ್ಕಾರಿ ನೌಕರರ ಮನೋಸ್ಥೆರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಲು ಸರ್ಕಾರವು ತೀರ್ಮಾನಿಸಿ ಆದೇಶಿಸಿದೆ.

ಸರ್ಕಾರವು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಕೆಳಕಂಡ ಷರತ್ತುಗಳಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಿದೆ. 

 ಸರ್ಕಾರದ ವಿಧಿಸಿರುವ ಷರತ್ತುಗಳು
  • ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
  • ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
  • ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
  • ಋತುಚಕ್ರ ರಜೆಯನ್ನು ಬೇರೆ ಯಾವುದೇ ರಚೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.
 
ಈ ಮೂಲಕ ಸರ್ಕಾರಿ ಮಹಿಳಾ ನೌಕರರಿಗೆ ವಾರ್ಷಿಕವಾಗಿ 12 ದಿನಗಳ ಋತುಚಕ್ರದ ರಜೆ ಸೌಲಭ್ಯ ಸಿಗಲಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.