ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಇಲ್ಲ- ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಾರ್ವಜನಿಕರ ಒಳಿತಿಗಾಗಿ ವಿತರಿಸಲು ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠ, 7:2 ಅನುಪಾತದಲ್ಲಿ ಬಹುಮತದ ತೀರ್ಪು ನೀಡಿದೆ. ಆದರೂ, ಕೆಲವೊಮ್ಮೆ ರಾಜ್ಯಗಳು ಖಾಸಗಿ ಆಸ್ತಿಗಳ ಮೇಲೆ ಹಕ್ಕು ಸಾಧಿಸಬಹುದು ಎಂದು ಪೀಠ ಹೇಳಿದೆ.
ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕರ ಒಳಿತಿಗಾಗಿ ವಿತರಣೆ ಮಾಡಲು ರಾಜ್ಯಗಳು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಪೀಠದ ಹಿಂದಿನ ತೀರ್ಪನ್ನು ತಳ್ಳಿಹಾಕಿದೆ.
ಈ ತೀರ್ಪಿನ ಮೂಲಕ ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿಯ ಭಾಗವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರಬಹುದು. ಆದರೆ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರುವುದು ಅನಿವಾರ್ಯವಲ್ಲ ಎಂದು ಪೀಠವು ಮೂರು ಭಾಗಗಳ ತೀರ್ಪಿನಲ್ಲಿ ಹೇಳಿದೆ. ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ವರ್ಷದ ಮೇ 1 ರಂದು ವಿಚಾರಣೆ ನಡೆಸಿದ ನಂತರ ಸಂವಿಧಾನ ಪೀಠವು ಖಾಸಗಿ ಆಸ್ತಿ ಪ್ರಕರಣದ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದಿನ ಆರ್ಥಿಕ ರಚನೆಯಲ್ಲಿ ಖಾಸಗಿ ವಲಯಕ್ಕೆ ಪ್ರಾಮುಖ್ಯತೆ ಇದೆ. ತೀರ್ಪು ನೀಡುವಾಗ, ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿ ಎಂದು ಕರೆಯಲಾಗುವುದಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ