ಸರ್ಕಾರಿ ಭೂಮಿ ಅತಿಕ್ರಮಣಕಾರರಿಗೆ ಭೂಸ್ವಾಧೀನ ಪರಿಹಾರ ಪಡೆಯುವ ಹಕ್ಕಿಲ್ಲ- ಹೈಕೋರ್ಟ್
ಹೈದರಾಬಾದ್: ಸರ್ಕಾರಿ ಜಮೀನು ಅತಿಕ್ರಮದಾರರಿಗೆ ಭೂಸ್ವಾಧೀನ ಪರಿಹಾರ ದೊರಕುವುದಿಲ್ಲ. ಸರ್ಕಾರಿ ಭೂಮಿಯ ಅತಿಕ್ರಮಣಕಾರರಿಗೆ RECTLARR ಕಾಯ್ದೆಯಡಿ ಭೂಸ್ವಾಧೀನ ಪರಿಹಾರ ಪಡೆಯುವ ಹಕ್ಕು ಇಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ವಿಜಯವಾಡದ ಗುನದಾಳ ಪ್ರದೇಶದ ನಿವಾಸಿಗಳು ಸಲ್ಲಿಸಿದ್ದ ಹಲವು ರಿಟ್ ಅರ್ಜಿಗಳನ್ನು ವಜಾಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್, ದೀರ್ಘಕಾಲದ ವಾಸ, ಆಸ್ತಿ ತೆರಿಗೆ ಪಾವತಿ ಅಥವಾ ವಿದ್ಯುತ್/ನೀರಿನ ಸಂಪರ್ಕಗಳು ಮಾಲೀಕತ್ವ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ; ಅಕ್ರಮ ಅತಿಕ್ರಮಣಕಾರರು 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರಕ್ಕೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿದೆ.
ದೀರ್ಘಕಾಲದ ವಾಸ ಅಥವಾ ಪಾರಂಪರಿಕ ವಾಸದ ಹಕ್ಕುಗಳನ್ನು ಹೇಳಿಕೊಂಡಿದ್ದರೂ ಸಹ, ಅಕ್ರಮ ಅತಿಕ್ರಮಣಕಾರರು ಕಾಯ್ದೆಯ ಸೆಕ್ಷನ್ 3(r) ಮತ್ತು 3(ಟn) ಅಡಿಯಲ್ಲಿ ವ್ಯಾಖ್ಯಾನಿಸಲಾದ “ಭೂಮಿಯ ಮಾಲೀಕ” ಅಥವಾ “ಆಸಕ್ತ ವ್ಯಕ್ತಿ”ಗಳಾಗಿ ಪರಿಗಣಿಸಲ್ಪಡುವುದಿಲ್ಲ. ಆದ್ದರಿಂದ ಸರ್ಕಾರಿ ಭೂಮಿ ಸಾರ್ವಜನಿಕ ಯೋಜನೆಗಳಿಗೆ ಅಗತ್ಯವಾದಾಗ ಅವರು ಭೂಸ್ವಾಧೀನ ಪ್ರಕ್ರಿಯೆ ಅಥವಾ ಪರಿಹಾರವನ್ನು ಬೇಡಿಕೊಳ್ಳಲು ಸಾಧ್ಯವಿಲ್ಲ. ಮಾನ್ಯತೆ ಹೊಂದಿದ ಹಕ್ಕುಪತ್ರವಿಲ್ಲದೆ ಸರ್ಕಾರಿ ಫೋರಂಬೊಕೆ ಭೂಮಿಯನ್ನು ಅತಿಕ್ರಮಿಸಿಕೊಂಡಿರುವವರು, ಭೂಸ್ವಾಧೀನ, ಪುನರ್ವಸತಿ ಮತ್ತು ಪುನಸ್ಥಾಪನೆಗೆ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, 2013 (RECTLARR ಕಾಯ್ದೆ) ಅಡಿಯಲ್ಲಿ ಪರಿಹಾರವನ್ನು ಕೇಳಲು ಅರ್ಹರಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
“ಅಕ್ರಮ ಅತಿಕ್ರಮಣಕಾರರು ಪರಿಹಾರವನ್ನು ಬೇಡಿಕೊಳ್ಳಲು ಅಥವಾ 2013ರ ಭೂ ಸ್ವಾಧೀನ ಕಾಯ್ದೆಯನ್ನು ಆಮಂತ್ರಿಸಲು ಸಾಧ್ಯವಿಲ್ಲ. ಈ ಕಾಯ್ದೆ ಅಕ್ರಮ ಅತಿಕ್ರಮಣಕಾರರ ಹಿತಕ್ಕಾಗಿ ರೂಪಿಸಲ್ಪಟ್ಟಿಲ್ಲ. ಇದು ಲಾಭದಾಯಕ ಕಾನೂನು ಆಗಿದ್ದು, ಮಾನ್ಯ ಹಕ್ಕುಪತ್ರ ಹೊಂದಿರುವ ಭೂಮಿಯ ಮಾಲೀಕರು, ವಿವಿಧ ಕಾನೂನುಗಳ ಅಡಿಯಲ್ಲಿ ನೀಡಲಾದ ಹಕ್ಕುಗಳನ್ನು ಹೊಂದಿರುವವರು, ಪಟ್ಟಾ ಹಕ್ಕುಗಳನ್ನು ಪಡೆದವರು ಅಥವಾ ನ್ಯಾಯಾಲಯದ ಆದೇಶದಿಂದ ಮಾಲೀಕರಾಗಿ ಘೋಷಿಸಲ್ಪಟ್ಟವರಿಗಷ್ಟೇ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಹರಿನಾಥ್ ಎನ್. ಅವರು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರರು ತಾವು ಮತ್ತು ತಮ್ಮ ಪೂರ್ವಜರು ಗುನದಾಳ (ವಿಜಯವಾಡ) ಪ್ರದೇಶದ ಭೂಮಿಯಲ್ಲಿ ಹಲವು ದಶಕಗಳಿಂದ, ಒಂದು ಶತಮಾನಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿದ್ದೇವೆ. ದೀರ್ಘಕಾಲದ ವಾಸ, ಆಸ್ತಿ ತೆರಿಗೆ ಮೌಲ್ಯಮಾಪನ, ವಿದ್ಯುತ್ ಸಂಪರ್ಕ ಹಾಗೂ ಮಹಾನಗರ ಪಾಲಿಕೆಯ ನೀರು ಸರಬರಾಜು ಇತ್ಯಾದಿಗಳನ್ನು ಆಧಾರವಾಗಿ ಪಡೆದು ತಮ್ಮ ವಾಸವನ್ನು ಕಾನೂನುಬದ್ಧ ಎಂದು ವಾದಿಸಿದ್ದರು. ರೈಲ್ವೆ ಓವರ್ ಬ್ರಿಡ್ಜ್ (ROB) ನಿರ್ಮಾಣಕ್ಕಾಗಿ ಭೂಮಿಯನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಾಗ ಈ ವಿವಾದ ಉಂಟಾಯಿತು. ಅಧಿಕಾರಿಗಳು, ಅರ್ಜಿದಾರರು ಭಾಗಶಃ ಕಾಲುವೆ ಭೂಮಿ, ಸಮಾಧಿ ಭೂಮಿ ಮತ್ತು ರಿವಾಸ್ ಕಾಲುವೆ ಎಂದು ವರ್ಗೀಕರಿಸಲಾದ ಸರ್ಕಾರಿ ಪೋರಂಬೋಕೆ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಅರ್ಜಿದಾರರು, ಕಾಯ್ದೆಯಡಿ ಅಧಿಕೃತ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಪರಿಹಾರ ಪಾವತಿಸಿದ ನಂತರ ಮಾತ್ರ ಸ್ಥಳಾಂತರ ಮಾಡಬಹುದು ಎಂದು ವಾದಿಸಿದರು. ಆದರೆ ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆ, ಯಾವುದೇ ಅರ್ಜಿದಾರರ ಬಳಿ ಮಾನ್ಯ ಹಕ್ಕುಪತ್ರ ಅಥವಾ ಪತ್ರ ಇಲ್ಲ. ಕೆಲವರು ನೋಂದಾಯಿಸದ ಮಾರಾಟ ಒಪ್ಪಂದಗಳ ಮೇಲೆ ಮಾತ್ರ ಅವಲಂಬಿಸಿದ್ದಾರೆ ಎಂದು ವಾದಿಸಿದರು. ಆಸ್ತಿ ತೆರಿಗೆ ಅಥವಾ ವಿದ್ಯುತ್/ನೀರಿನ ಬಿಲ್ ಪಾವತಿ ಭೂಮಿಯ ಮಾಲೀಕತ್ವವನ್ನು ನೀಡುವುದಿಲ್ಲ, ಏಕೆಂದರೆ ಆ ಭೂಮಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಾಗಿ ಅಗತ್ಯವಿರುವ ಸರ್ಕಾರಿ ಭೂಮಿಯಾಗಿದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳು ಮಾನವೀಯ ಆಧಾರದ ಮೇಲೆ ವಸತಿ ಯೋಜನೆಗಳ ಅಡಿಯಲ್ಲಿ ಹಲವರಿಗೆ ಪರ್ಯಾಯ ವಸತಿ ಒದಗಿಸಲಾಗಿದ್ದು, ಹಲವಾರು ಅರ್ಜಿದಾರರು ಆ ಹಂಚಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಕೂಡಾ ತಿಳಿಸಿದರು.
ನ್ಯಾಯಾಲಯವು ಅರ್ಜಿಗಳನ್ನು ತಿರಸ್ಕರಿಸಿ, ದೀರ್ಘಕಾಲದ ಅಥವಾ ನಿರಂತರ ವಾಸ ಅಕ್ರಮ ಅತಿಕ್ರಮಣವನ್ನು ಕಾನೂನುಬದ್ದಗೊಳಿಸುವುದಿಲ್ಲ ಎಂದು ಹೇಳಿತು. ತೆರಿಗೆ ಮೌಲ್ಯಮಾಪನ, ವಿದ್ಯುತ್ ಅಥವಾ ನೀರಿನ ಸಂಪರ್ಕಗಳು ಮಾಲೀಕತ್ವ ಅಥವಾ ವರ್ಗಾವಣೆಯ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
