ಮಸೂದೆಗಳಿಗೆ ತಡೆ ಹಿಡಿದ ರಾಜ್ಯಪಾಲರ ನಿರ್ಧಾರ ನಿರಂಕುಶಯುತ ಮತ್ತು ಕಾನೂನುಬಾಹಿರ – ಸುಪ್ರೀಂ ಕೋರ್ಟ್ ಚಾಟಿ

ನವದೆಹಲಿ : ಬಹುದಿನಗಳಿಂದ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
10 ಪ್ರಮುಖ ಮಸೂದೆಗಳಿಗೆ ಅಂಕಿತ ಹಾಕದೆ ತಡೆಹಿಡಿದ ರಾಜ್ಯಪಾಲ ಆರ್ ಎನ್ ರವಿ ನಿರ್ಧಾರ ಕಾನೂನುಬಾಹಿರ ಮತ್ತು ನಿರಂಕುಶಯುತವಾದುದು ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ತಮಿಳುನಾಡು ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸರ್ಕಾರದಿಂದ ಬಂದಿರುವ ಯಾವುದೇ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ಸಹಿ ಹಾಕದೇ ಇಟ್ಟುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ತಮಿಳುನಾಡು ಸರಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಭಾರೀ ಗೆಲುವಾದಂತಾಗಿದೆ.
ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಆರ್.ಮಹಾದೇವನ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಈ ತೀರ್ಪು ನೀಡಿದೆ. ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ನಿರಂಕುಶವಾಗಿದೆ. ಹೀಗಾಗಿ 10 ವಿಧೇಯಕಗಳ ಬಗ್ಗೆ ರಾಜ್ಯಪಾಲರು ತೆಗೆದುಕೊಂಡಿರುವ ಎಲ್ಲಾ ಕ್ರಮಗಳನ್ನು ಬದಿಗಿಡಲಾಗಿದೆ. ರಾಜ್ಯಪಾಲ ರವಿ ‘ಸದುದ್ದೇಶದಿಂದ’ ನಡೆದುಕೊಂಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಿ 200ರ ಪ್ರಕಾರ, ರಾಜ್ಯಪಾಲರು ಚುನಾಯಿತ ರಾಜ್ಯ ಸರಕಾರದ ಸಲಹೆ ಮತ್ತು ಬೆಂಬಲದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು. ರಾಜ್ಯಪಾಲರು, ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸುವಂತಿಲ್ಲ. ಅವರು ಸಂಪೂರ್ಣ ವೀಟೋವನ್ನು ಹೊಂದಿರುವಂತೆ ವರ್ತಿಸುವಂತಿಲ್ಲ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ