20/05/2025

Law Guide Kannada

Online Guide

ಸ್ತನ ಹಿಡಿದರೆ ಅತ್ಯಾಚಾರವಲ್ಲ: ಇದೊಂದು ಸಂವೇಹನಾಶೀಲ ರಹಿತ, ಅಮಾನವೀಯ ತೀರ್ಪು- ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೆಂಡಾಮಂಡಲ

ನವದೆಹಲಿ: ಸ್ತನವನ್ನು ಮುಟ್ಟುವುದು, ಪ್ಯಾಂಟ್ ದಾರವನ್ನು ಎಳೆಯುವುದು ಅತ್ಯಾಚಾರದ ಯತ್ನವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ವಿರುದ್ದ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದ್ದು, ಇದೊಂದು ಸಂವೇಹನಾಶೀಲ ರಹಿತ, ಅಮಾನವೀಯ ತೀರ್ಪು ಎಂದು ಕಿಡಿಕಾರಿ ಆ ತೀರ್ಪಿಗೆ ತಡೆ ನೀಡಿದೆ.

ಮಾರ್ಚ್ 17ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಈ ತೀರ್ಪಿಗೆ ಕಾನೂನು ವಿಶ್ಲೇಷಕರು ಸೇರಿ ಸಾಮಾಜಿಕವಾಗಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ ಈ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ. ಸ್ವಯಂ ಪ್ರೇರಿತವಾಗಿ ಈ ತೀರ್ಪಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ.

ಇದೊಂದು ಸಂವೇಹನಾಶೀಲ ರಹಿತ ಹಾಗೂ ಅಮಾನವೀಯ ಹಾಗೂ ಸೂಕ್ಷ್ಮತೆ ಕಳೆದುಕೊಂಡಿರುವ ತೀರ್ಪು . ಪೋಕ್ಸೋ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡಿದ ತೀರ್ಪಿಗೆ ಸಾಮಾನ್ಯವಾಗಿ ತಡೆ ನೀಡುವುದಿಲ್ಲ. ಆದರೆ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಅತ್ಯಾಚಾರ ಯತ್ನದ ಕುರಿತು ನೀಡಿರುವ ಅಭಿಪ್ರಾಯ ಮತ್ತು ವಿವರಣೆಗಳು ಆಘಾತಕಾರಿಯಾಗಿದೆ ಮತ್ತು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿವೆ. ಇದೊಂದು ಅಮಾನವೀಯ ತೀರ್ಪು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪಿನ ಪ್ಯಾರಾ 21, 24 ಹಾಗೂ 36 ರಲ್ಲಿ ಮಾಡಲಾಗಿರುವ ಉಲ್ಲೇಖಗಳು ಅತ್ಯಂತ ಹೀನವಾಗಿದೆ. ಕೆಟ್ಟ ಅಭಿಪ್ರಾಯವಾಗಿದ್ದು, ಮಾನವೀಯತೆ ಮತ್ತು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿವೆ ಎಂದು ನ್ಯಾಯಪೀಠ ವಿಶ್ಲೇಷಿಸಿದೆ.

ಅಲಹಾಬಾದ್ ಹೈಕೋರ್ಟ್ನ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ದೇಶದ ಯಾವುದೇ ನ್ಯಾಯಾಲಯಗಳು ಪೋಕ್ಸೋ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ನೀಡಿದ ಅಭಿಪ್ರಾಯವನ್ನು ಯಾವುದೇ ಸಂದರ್ಭದಲ್ಲೂ ಪರಿಗಣಿಸಬಾರದು ಎಂದು ತಾಕೀತು ಮಾಡಿದೆ. ಸ್ವಂತ ವಿವೇಚನೆ ಮತ್ತು ಸಂವೇದನಾಶೀಲತೆಯಿಂದ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ನಾರಾಯಣ ಮಿಶ್ರಾ ತಮ್ಮ ತೀರ್ಪಿನಲ್ಲಿ ಅತ್ಯಾಚಾರ ಯತ್ನದ ಬಗ್ಗೆ ವಿವಾದಾತ್ಮಕ ವಿವರಣೆ ನೀಡಿದರು. ಈ ತೀರ್ಪು ಹಾಗೂ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಪೀಠ ನೋಟೀಸ್ ಜಾರಿಗೊಳಿಸಿದೆ.

ಏನಿದು ವಿವಾದಿತ ತೀರ್ಪು?
ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರವಾಗುವುದಿಲ್ಲ. ಈ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಲು ಬರುವುದಿಲ್ಲ. ಈ ಕೃತ್ಯಗಳು ಅತ್ಯಾಚಾರಕ್ಕೆ ನಡೆಸಿದ ಸಿದ್ಧತೆಯಷ್ಟೇ. ಇದು ಕೃತ್ಯ ಮಾಡಲು ನಿಜವಾದ ಪ್ರಯತ್ನಕ್ಕಿಂತ ಭಿನ್ನವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು.

ಇಬ್ಬರು ಆರೋಪಿಗಳು ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರಿದ್ದ ಏಕಪೀಠ ಮಾರ್ಚ್ 17ರಂದು ಈ ತೀರ್ಪು ನೀಡಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.