ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿದ 10 ದಿನಗಳ ಬಳಿಕ ಅಂಗೀಕರಿಸಬೇಕು: ಹೈಕೋರ್ಟ್

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರಾಜೀನಾಮೆ ನೀಡಿದರೇ, ಕಾರಣ ಸಂಬಂಧ ವಿಚಾರಣೆ ನಡೆಸಿ, ರಾಜೀನಾಮೆ ಸಲ್ಲಿಸಿದ 10 ದಿನಗಳ ಬಳಿಕ ಉಪ ವಿಭಾಗಾಧಿಕಾರಿಗಳು ಅಂಗೀಕರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಕೋಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕರಿಸಿದ್ದ ಉಪವಿಭಾಗಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಮಾಲಗೌಡ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠವು, ನಿಯಮಗಳನ್ನು ಪಾಲಿಸದೆ ಆಂಗೀಕರಿಸಿ ಆದೇಶಿಸಿದ್ದ ರಾಜೀನಾಮೆಯನ್ನು ರದ್ದುಪಡಿಸಿದೆ.
ನಿಯಮಗಳ ಪ್ರಕಾರ ರಾಜೀನಾಮೆ ಸಲ್ಲಿಸಿದ ದಿನವನ್ನು ಹೊರತುಪಡಿಸಿ ನಂತರ 10 ದಿನಗಳು ಎಂಬುದಾಗಿ ಕಾಯ್ದೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಅದಕ್ಕೂ ಮುನ್ನ ಅಂಗೀಕರಿಸಿರುವ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ರಾಜೀನಾಮೆ ನೀಡಿದ ಬಳಿಕ ಅದಕ್ಕೆ ನೀಡಿದ ಕಾರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕು ಎಂಬುದಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 48ರ ಅಡಿಯಲ್ಲಿ ತಿಳಿಸಲಾಗಿದೆ. ರಾಜೀನಾಮೆ ಅಂಗೀಕರಿಸುವ ಸಂದರ್ಭದಲ್ಲಿ ಬೆದರಿಕೆ, ಒತ್ತಾಯ ಮಾಡಲಾಗಿದೆಯೇ ಎಂಬುದನ್ನು ಗಮನಿಸಬೇಕು. ಆ ಕಾರ್ಯ ಮಾಡದೇ 2024ರ ಡಿ.16ರಂದು ಸಲ್ಲಿಸಿರುವ ರಾಜೀನಾಮೆ ಪರಿಶೀಲನೆ ನಡೆಸದೆ ಅಂಗೀಕರಿಸಿ ಆದೇಶಿಸಿದ್ದಾರೆ. ಹೀಗಾಗಿ ಆದೇಶವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಹುದ್ದೆಗೆ ರಾಜೀನಾಮೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಯ್ದೆಯ ಸೆಕ್ಷನ್ 48(1)ರ ಅಡಿಯಲ್ಲಿ ಅಗತ್ಯ ಪರಿಶೀಲನೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಅದು ನಡೆದಿಲ್ಲ ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ವಿವರ
ಮಾಲಗೌಡ ಎಂಬುವವರು, 2024ರ ಡಿ. 4ರಂದು ಗ್ರಾಮ ಪಂಚಾಯತ್ ನ ಇತರೆ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಮ್ಮ ರಾಜೀನಾಮೆಯನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದರು. ಬಳಿಕ 2024ರ ಡಿ.16ರಂದು ಮತ್ತೊಂದು ಪತ್ರವನ್ನು ಸಲ್ಲಿಸಿ ರಾಜೀನಾಮೆ ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದರು. ಆದರೆ, ಉಪವಿಭಾಗಾಧಿಕಾರಿ 2024ರ ಡಿ.4 ರಂದು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿ ಆದೇಶಿಸಿರುವುದಾಗಿ ತಿಳಿಸಿದ್ದರು.
ಉಪವಿಭಾಗಾಧಿಕಾರಿ ಕ್ರಮವನ್ನ ಪ್ರಶ್ನಿಸಿ ಮಾಲಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 48(3)ರ ಪ್ರಕಾರ ರಾಜೀನಾಮೆಯನ್ನು ಹಿಂಪಡೆಯಲು 10 ದಿನಗಳ ಕಾಲಾವಕಾಶವಿದೆ. ಆದರೆ, ಅರ್ಜಿದಾರರು ಡಿಸೆಂಬರ್ 14 ರಾಜೀನಾಮೆ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದರು. ಅಂದು ಎರಡನೇ ಶನಿವಾರ ಮತ್ತು ಮರುದಿನ ಭಾನುವಾರವಾಗಿತ್ತು. ಹಾಗಾಗಿ ಅವರು ಡಿ.16ರಂದು ರಾಜೀನಾಮೆ ಹಿಂಪಡೆದಿದ್ದರು. ಹೀಗಾಗಿ 10 ದಿನಗಳು ಆಗುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು ರಾಜೀನಾಮೆ ಸಲ್ಲಿಸಿದ 10 ದಿನಗಳ ಬಳಿಕ ಅದನ್ನು ಅಂಗೀಕರಿಸಲಾಗಿದೆ. ಆದರೆ, ಅದನ್ನು ಹಿಂಪಡೆಯಲು ಮನವಿ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ