‘ಶ್ರವಣದೋಷವುಳ್ಳ ವಕೀಲರು ಅಲ್ಪಸಂಖ್ಯಾತರು: ವಕೀಲೆ ಸಾರಾ ಸನ್ನಿ ವಾದ ಮಂಡನೆಗೆ ಹೈಕೋರ್ಟ್ ಶ್ಲಾಘನೆ
ಬೆಂಗಳೂರು: ‘ಪತಿ ಪತ್ನಿ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ವೇಳೆ ಶ್ರವಣದೋಷವುಳ್ಳ ವಕೀಲಾರದ ಸಾರಾ ಸನ್ನಿ ಅವರ ವಾದ ಮಂಡನೆಗೆ ಹೈಕೋರ್ಟ್ ಶ್ಲಾಘನೆ ವ್ಯಕ್ತಪಡಿಸಿದೆ.
ವಾಕ್ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಮೌನದ ಗಡಿ ದಾಟಿ ವೃತ್ತಿಪರತೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಹೈಕೋರ್ಟ್ ‘ಶ್ರವಣದೋಷವುಳ್ಳ ವಕೀಲರು ಅಪರೂಪದ ಅಲ್ಪಸಂಖ್ಯಾತರು ಎಂಬುದು ನಿರ್ವಿವಾದ ಸಂಗತಿ’ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸ್ಕಾಟ್ಲಂಡ್ ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಈ ಕೌಟುಂಬಿಕ ವ್ಯಾಜ್ಯದಲ್ಲಿ ಪತಿಗೆ ಲುಕ್ಔಟ್ (ಎಲ್ಒಸಿ) ನೋಟಿಸ್ ಜಾರಿಗೊಳಿಸಲಾಗಿತ್ತು. ನನ್ನ ವಿರುದ್ಧ ಹೊರಡಿಸಲಾಗಿರುವ ಎಲ್ಒಸಿ ರದ್ದುಗೊಳಿಸಬೇಕು’ ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಬೆಂಗಳೂರಿನಲ್ಲಿರುವ ಅರ್ಜಿದಾರರ ಪತ್ನಿಯ (34) ಪರವಾಗಿ ಸಾರಾ ಸನ್ನಿ ವಾದಮಂಡಿಸಿದ್ದರು.
ತಮ್ಮ ಆಂಗಿಕ ಸಂಜ್ಞೆಗಳ ಮೂಲಕ ದುಭಾಷಿಯ ನೆರವಿನಲ್ಲಿ ಸಂಕೇತ ಭಾಷೆ ಬಳಸಿ ಸಾರಾ ಸನ್ನಿ ವಾದ ಮಂಡಿಸಿದ್ದು, ಅಂತಿಮವಾಗಿ ಪತಿ ತಮ್ಮ ಅರ್ಜಿಯನ್ನು ಹಿಂಪಡೆದಿದ್ದು ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿ ತೀರ್ಪು ಪ್ರಕಟಿಸಿತು.
‘ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರುವಾಗ ಯಾವುದೇ ನೆಪದಲ್ಲಿ, ಲುಕ್ಔಟ್ ಸುತ್ತೋಲೆಯನ್ನು (ಎಲ್ಸಿ) ಹಿಂಪಡೆಯಲು, ಅಮಾನತುಗೊಳಿಸಲು ಅಥವಾ ಮಾರ್ಪಡಿಸಲು ಕೋರುವ ಅರ್ಜಿಗಳನ್ನು ಸ್ವೀಕರಿಸಬಾರದು. ಈ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡುವ ಯಾವುದೇ ವಿನಾಯಿತಿಯನ್ನು ನ್ಯಾಯವ್ಯಾಪ್ತಿ ಮೀರಿದ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿತು. ಈ ತೀರ್ಪಿನ ಪ್ರತಿಯನ್ನು ರಾಜ್ಯ ವ್ಯಾಪ್ತಿಯ ಎಲ್ಲಾ ಕ್ರಿಮಿನಲ್ ನ್ಯಾಯಾಲಯಗಳಿಗೆ ತಕ್ಷಣವೇ ರವಾನಿಸಬೇಕು’ ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.
ಯಾವುದೇ ಅರ್ಜಿದಾರ ಲುಕ್ಔಟ್ ಸುತ್ತೋಲೆಯನ್ನು ಪ್ರಶ್ನಿಸಲು ಅಥವಾ ದುರ್ಬಲಗೊಳಿಸಲು ಪ್ರಯತ್ನಿಸಿದಾಗ ಮತ್ತು ಈ ತೀರ್ಪಿನಲ್ಲಿ ಉಲ್ಲೇಖಿಸುವ ಅವಲೋಕನಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ.
ಅಂತೆಯೇ ಪ್ರತಿವಾದಿಯಾದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭಾರತದ ಭೂಪ್ರದೇಶದಲ್ಲಿ ಯಾರ ವಿರುದ್ಧ ಎಲ್ ಸಿ ನೀಡಲಾಗುತ್ತಿದೆಯೋ ಆ ವ್ಯಕ್ತಿ ಭಾರತಕ್ಕೆ ಬಂದಾಗ ಅನುಸರಿಸಬೇಕಾದ ಕಾರ್ಯವಿಧಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿ’ ಎಂದು ಸೂಚಿಸಿತು.
ಸಾರಾ ಸನ್ನಿ ಅವರ ವಾದ ಮಂಡನೆ ಬಗ್ಗೆ ಕಾಳಜಿ ಮತ್ತು ಸಮವೇದನಾಶೀಲತೆ..
ತೀರ್ಪಿನ ವೇಳೆ ವಕೀಲೆ ಸಾರಾ ಸನ್ನಿ ಅವರ ವಾದ ಮಂಡನೆಯ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಸಂವೇದನಾಶೀಲತೆಯನ್ನು ವ್ಯಕ್ತಪಡಿಸಿರುವ ನ್ಯಾಯಪೀಠವು, ‘ಸಮಾನತೆಯ ರಕ್ಷಾಸ್ತಂಭಗಳು ಎನಿಸಿರುವ ಸಾಂವಿಧಾನಿಕ ನ್ಯಾಯಾಲಯಗಳು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಶ್ರವಣದೋಷವುಳ್ಳ ವಕೀಲರು ಮತ್ತು ಅವರ ಪೂರ್ಣ ಭಾಗವಹಿಸುವಿಕೆಯ ನಡುವೆ ಇರುವ ಅಡಚಣೆ ಒಡ್ಡುವ ಧ್ವನಿಯ ತಡೆಗೋಡೆಯನ್ನು ಮುರಿಯಬೇಕಿದೆ’ ಎಂದು ಹೇಳಿದೆ.
‘ಇಂತಹವರಿಗೆ ಸಹಾಯ ಒದಗಿಸಲು, ಅನುಕೂಲ ಮಾಡಿಕೊಡಲು ಮತ್ತು ವಾದ ಮಂಡನೆಗೆ ವ್ಯಾಪಕ ಅಧಿಕಾರ ನೀಡುವ ನಿಟ್ಟಿನಲ್ಲಿ ಉನ್ನತ ಕೋರ್ಟ್ಗಳು ಆದ್ಯತೆ ನೀಡಬೇಕಿದೆ. ಆಸ್ಟ್ರೇಲಿಯಾದ ನ್ಯಾಯಾಲಯಗಳಲ್ಲಿ ಇಂತಹ ಅಲ್ಪಸಂಖ್ಯಾತರಿಗೆ ವೃತ್ತಿಸಹಾಯಕವಾದ ಸೌಕರ್ಯಗಳನ್ನು ಒದಗಿಸಲು ದಾರಿ ಮಾಡಿಕೊಡಲಾಗಿದೆ. ಅಷ್ಟೇ ಏಕೆ, ಶ್ರವಣದೋಷವುಳ್ಳ ನ್ಯಾಯಾಧೀಶರನ್ನೇ ನೇಮಕ ಮಾಡುವಂತಹ ಮಹತ್ವದ ಕೈಂಕರ್ಯ ಇಂಗ್ಲೆಂಡ್ನಲ್ಲಿ ಪ್ರಬುದ್ಧ ಶಾಸನದ ಮೂಲಕ ಚಾಲ್ತಿಯಲ್ಲಿದೆ’ ಎಂಬ ಅಂಶವನ್ನು ಉಲ್ಲೇಖಿಸಿತು.
ಯಾವುದೇ ಅನುಭವಿ ವಕೀಲರಿಗೆ ಸರಿಸಮಾನವಾಗಿ ತಮ್ಮ ವಾದವನ್ನು ಶಾಂತತೆಯಿಂದ ಮಂಡಿಸಿರುವ ಸಾರಾ ಸನ್ನಿ ಪ್ರತಿ ಅವಮಾನವನ್ನೂ ಧಿಕ್ಕರಿಸಿದ್ದಾರೆ. ಧ್ವನಿ ಅಥವಾ ಸಂಕೇತಗಳ ತೀವ್ರತೆಯನ್ನು ಚಾತುರ್ಯದಿಂದ ಪ್ರಸ್ತುತಪಡಿಸಿದ್ದಾರೆ’ ಎಂದು ನ್ಯಾಯಪೀಠ ಬಣ್ಣಿಸಿತು.
‘ಸಂಸ್ಕರಣಗೊಂಡ ವಿಶಿಷ್ಟ ಲಕ್ಷಣದ ವಾದ ಮಂಡನೆಯ ಪ್ರಯತ್ನ ಮತ್ತು ಎಲ್ಲರಿಗೂ ಇದೊಂದು ಶಾಶ್ವತ ಸ್ಫೂರ್ತಿಯಾಗಿ ಉಳಿಯುತ್ತದೆ. ಮಾತ್ರವಲ್ಲ ನ್ಯಾಯವು ತನ್ನ ನಿಜವಾದ ಅರ್ಥದಲ್ಲಿ ಹೇಗಿರುತ್ತದೆ ಎಂಬುದನ್ನು ಅವರ ಈ ಪ್ರಯತ್ನ ನ್ಯಾಯಾಂಗದ ಸ್ಮೃತಿಪಟಲದಲ್ಲಿ ದೇದೀಪ್ಯಮಾನವಾಗಿ ಉಳಿಸುತ್ತದೆ’ ಎಂದು ಹೇಳಿದೆ. ಡಾ.ವಿ.ಎನ್.ರೇಣುಕಾ ಅವರು ಸಾರಾ ಸನ್ನಿ ಅವರಿಗೆ ಸಂಕೇತ ಭಾಷೆಯ ನೆರವು ನೀಡಿದ್ದರು.
ಅರ್ಜಿದಾರ ಪತಿಯ ಪರ ಹೈಕೋರ್ಟ್ ವಕೀಲ ಕೆ.ರವೀಂದ್ರನಾಥ್ ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಹಾಗೂ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
