ಹೈಕೋರ್ಟ್ ನ ಎಲ್ಲಾ ಶ್ರೇಣಿಯ ನ್ಯಾಯಾಧೀಶರು ಪೂರ್ಣ ಪಿಂಚಣಿಗೆ ಅರ್ಹರು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಹೈಕೋರ್ಟ್ಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ ಎಲ್ಲಾ ಜಡ್ಜ್ ಗಳು ಪೂರ್ಣ ಪಿಂಚಣಿ ಮತ್ತು ನಿವೃತ್ತಿ ಯೋಜನೆಗಳಿಗೆ ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಹೆಚ್ಚುವರಿ ನ್ಯಾಯಮೂರ್ತಿಗಳು ಸೇರಿದಂತೆ ಹೈಕೋರ್ಟ್ನ ಎಲ್ಲಾ ನ್ಯಾಯಮೂರ್ತಿಗಳು ಪೂರ್ಣ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪಡೆಯಲು ಅರ್ಹರು . ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ವಾರ್ಷಿಕ ₹15 ಲಕ್ಷ ಪಿಂಚಣಿ ಪಡೆಯಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಹೆಚ್ಚುವರಿ ನ್ಯಾಯಾಧೀಶರು ಮತ್ತು ನೇಮಿತ ಜಡ್ಜ್ಗಳ ನಡುವೆ ಪಿಂಚಣಿ, ನಿವೃತ್ತಿ ಯೋಜನೆಗಳ ಸೌಲಭ್ಯದಲ್ಲಿ ತಾರತಮ್ಯವಿದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪೀಠವು, ಜನವರಿ 28 ರಂದು ತೀರ್ಪು ಕಾಯ್ದಿರಿಸಿತ್ತು.
ಪಿಂಚಣಿ ತಾರತಮ್ಯವು ಸಂವಿಧಾನದ 14 ನೇ ವಿಧಿಯ ಅಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜಡ್ಜ್ ಗಳನ್ನು ಯಾವಾಗ ನೇಮಿಸಲಾಯಿತು. ಅವರು ಹೆಚ್ಚುವರಿ ನ್ಯಾಯಾಧೀಶರಾಗಿ ನಿವೃತ್ತರಾದರೇ ಅಥವಾ ಖಾಯಂಗೊಳಿಸಲಾಯಿತೇ ಎಂಬುದನ್ನು ಲೆಕ್ಕಿಸದೇ ಎಲ್ಲರಿಗೂ ಪೂರ್ಣ ಪಿಂಚಣಿ ನೀಡಬೇಕು ಎಂದು ಪೀಠವು ಹೇಳಿದೆ. ನ್ಯಾಯಮೂರ್ತಿಗಳ ನೇಮಕದ ಅವಧಿ ಮತ್ತು ಅವರ ಹುದ್ದೆ ಆಧಾರದಲ್ಲಿ ತಾರತಮ್ಯ ಮಾಡುವುದು ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ನ್ಯಾಯಪೀಠ ಪ್ರತಿಪಾದಿಸಿತು.
ಸಿಜೆಐ ಗವಾಯಿ ಅವರು, ‘ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿ ಮೃತಪಟ್ಟರೆ ಅವರ ಕುಟುಂಬಸ್ಥರು, ಕಾಯಂ ನ್ಯಾಯಮೂರ್ತಿಗಳು ಪಡೆಯುವಷ್ಟೇ ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ’ ಎಂದು ತಿಳಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿಗೆ ಸಂಬಂಧಿಸಿದ ಸಂವಿಧಾನದ 200ನೇ ವಿಧಿಯನ್ನು ಪರಿಶೀಲಿಸಿ ಈ ತೀರ್ಪು ಪ್ರಕಟಿಸಲಾಗಿದೆ. ನೂತನ ಪಿಂಚಣಿ ವ್ಯವಸ್ಥೆಯಡಿ ಬರುವವರಿಗೂ ಇಷ್ಟೇ ಪಿಂಚಣಿ ಲಭ್ಯ ಇರಲಿದೆ. ಹೆಚ್ಚುವರಿ ನ್ಯಾಯಮೂರ್ತಿ ಸೇರಿ ಹೈಕೋರ್ಟ್ನ ಎಲ್ಲ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ವಾರ್ಷಿಕ ₹13.50 ಲಕ್ಷ ಪಿಂಚಣಿ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
